‘ರಿಯಲ್ ಸ್ಟಾರ್’ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾವು ಘೋಷಣೆಯಾದಾಗಿನಿಂದಲೂ ಒಂದುಮಟ್ಟದ ಕುತೂಹಲವನ್ನು ಸೃಷ್ಟಿ ಮಾಡಿತ್ತು. ಯಾವಾಗ ಟೀಸರ್ ಮತ್ತು ಟ್ರೇಲರ್ ರಿಲೀಸ್ ಆಯ್ತೋ, ಸಿನಿಮಾದ ಬಗ್ಗೆ ಇದ್ದ ಕ್ಯೂರಿಯಾಸಿಟಿ ಡಬಲ್ ಆಗಿತ್ತು. ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಸಿನಿಮಾ ಈಗ ತೆರೆಗೆ ಬಂದಿದೆ.
ಇದು ಡಾನ್ ಅರ್ಕೇಶ್ವರನ ಕಥೆ
ಅಮರಪುರ ಎಂಬ ಪಟ್ಟಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರ ಎಂಬುವವರ ಕುಟುಂಬ ಇರುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಆ ಕುಟುಂಬದಲ್ಲಿ ಹುಟ್ಟಿರುವ ಅರ್ಕೇಶ್ವರ (ಉಪೇಂದ್ರ) ತುಂಬ ಮೃದು ಸ್ವಭಾವದವನು. ಆದರೆ ಇಂತಹ ಮೃದು ಸ್ವಭಾವದ ಅರ್ಕೇಶ್ವರ ಹೇಗೆ ಇಡೀ ಭಾರತದ ಡಾನ್ ಆಗಿ ಮೆರೆಯುತ್ತಾನೆ ಅನ್ನೋದೇ ‘ಕಬ್ಜ’ ಚಿತ್ರದ ಕಥೆ.
ಮೇಕಿಂಗ್ ನಲ್ಲಿ ಕಿಂಗ್ ಎನಿಸಿಕೊಂಡ ‘ಕಿಂಗ್’ ಕಬ್ಜ
‘ಕಬ್ಜ’ ಸಿನಿಮಾದ ಟೀಸರ್ ಮತ್ತು ಟ್ರೇಲರ್ ರಿಲೀಸ್ ಆದ ದಿನದಿಂದಲೂ ಅದರ ಮೇಕಿಂಗ್ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದರು. ಒಂದಷ್ಟು ಮಂದಿ ‘ಕೆಜಿಎಫ್’ ಥರ ಇದೆ ಎಂದು ಕೂಡ ಕಾಮೆಂಟ್ ಮಾಡಿದ್ದರು. ನಿರ್ದೇಶಕ ಆರ್. ಚಂದ್ರು ಈ ಬಾರಿ ಮೇಕಿಂಗ್ ನತ್ತ ತುಂಬ ಗಮನ ನೀಡಿದ್ದಾರೆ. ಅದ್ದೂರಿತನಕ್ಕೆ ಮನ್ನಣೆ ನೀಡಿದ್ದಾರೆ. ದುಬಾರಿ ಸೆಟ್ ಗಳನ್ನು, ನೂರಾರು ಜೂನಿಯರ್ ಕಲಾವಿದರನ್ನು ಬಳಸಿಕೊಂಡು ಸಿನಿಮಾ ಮಾಡಿದ್ದಾರೆ. ಇದು ನಟ ಉಪೇಂದ್ರ ಅವರ ಕರಿಯರ್ ನಲ್ಲೇ ಅತ್ಯಂತ ದುಬಾರಿ ಸಿನಿಮಾ ಎನ್ನಬಹುದು. ಆ ಮಟ್ಟಕ್ಕೆ ‘ಕಬ್ಜ’ ಮೇಕಿಂಗ್ ಇದೆ. ಎಮೋಷನ್ ಜೊತೆಗೆ ಆ್ಯಕ್ಷನ್ ಗೆ ಚಂದ್ರು ಜಾಸ್ತಿ ಮಹತ್ವ ನೀಡಿದ್ದಾರೆ. ಭರ್ಜರಿ ಫೈಟ್ ಗಳು ಇಲ್ಲಿವೆ. ಝಳಪಿಸುವ ಕತ್ತಿಗಳು, ಸದ್ದು ಮಾಡುವ ತುಪಾಕಿಗಳು, ಅದರಿಂದ ಚಿಮ್ಮುವ ರಕ್ತ ತೆರೆಯನ್ನು ಆವರಿಸಿಕೊಳ್ಳುತ್ತದೆ. ಕೆಲವು ಕಡೆ ಮಾತ್ರ ಸಂಭಾಷಣೆ ಇಷ್ಟವಾಗುತ್ತದೆ. ವಿಎಫ್ ಎಕ್ಸ್ ಮತ್ತು ಚಿತ್ರಕಥೆ ಮೇಲೆ ಇನ್ನಷ್ಟು ವರ್ಕ್ ಮಾಡಬಹುದಿತ್ತು.
ಉಪೇಂದ್ರಗೆ ಡಿಫರೆಂಟ್ ಪಾತ್ರ
ನಟ ಉಪೇಂದ್ರ ಅವರು ಎರಡು ಶೇಡ್ನ ಪಾತ್ರ ಮಾಡಿದ್ದು, ಪಾತ್ರಕ್ಕೆ ಜೀವ ತುಂಬಿಸಲು ಪ್ರಯತ್ನಿಸಿದ್ದಾರೆ. ಫೈಟ್ ಸೀನ್ ಗಳಲ್ಲಿ ಮಿಂಚುವ ಉಪ್ಪಿ, ‘ಚುಮ್ ಚುಮ್ ಚಳಿ ಚಳಿ..’ ಹಾಡಿನಲ್ಲಿ ಮೈ ಚಳಿ ಬಿಟ್ಟು ಸಖತ್ ಸ್ಟೆಪ್ ಹಾಕಿದ್ದಾರೆ. ರಾಣಿಯಾಗಿ ಶ್ರೀಯಾ ಶರಣ್ ಇಷ್ಟವಾಗುತ್ತಾರೆ. ನಿಜವಾಗಿಯೂ ಅವರ ರಾಜಮನೆತನದವರೇನೋ ಎಂಬಷ್ಟರ ಮಟ್ಟಿಗೆ ಶ್ರೀಯಾರನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇನ್ನು, ಪರಭಾಷಾ ನಟ ಮುರಳಿ ಶರ್ಮಾ ಅವರ ಡಬ್ಬಿಂಗ್ ಸರಿಯಾಗಿ ಹೊಂದಿಕೆಯಾಗಿಲ್ಲ. ಬಹುತೇಕ ಜನಪ್ರಿಯ ಕಲಾವಿದರು ಒಂದೆರಡು ಸೀನ್ಗಳಲ್ಲಿ ಬಂದು ಹೋಗುತ್ತಾರೆ. ಅಶ್ವತ್ಥ್ ನೀನಾಸಂ, ಬಿ ಸುರೇಶ ಕೊಂಚ ಗಮನಸೆಳೆಯುವ ಪಾತ್ರಗಳು ಸಿಕ್ಕಿವೆ.
ಸುದೀಪ್ & ಶಿವಣ್ಣ ಕಾಂಬಿನೇಷನ್
ನಟ ಸುದೀಪ್ ಅವರು ಸಿನಿಮಾದ ಆರಂಭ ಮತ್ತು ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಗತ್ತು ಗಾಂಭೀರ್ಯದಿಂದ ಸುದೀಪ್ ನಟಿಸಿದ್ದಾರೆ. ಹಾಗೆಯೇ, ಇಡೀ ಕಥೆಯ ನಿರೂಪಣೆ ಕೂಡ ಅವರದ್ದೇ. ಸಿನಿಮಾದ ಕೊನೇ ಸೀನ್ನಲ್ಲಿ ಕಾಣಿಸಿಕೊಳ್ಳುವ ಶಿವರಾಜ್ಕುಮಾರ್, ದೊಡ್ಡ ಕುತೂಹಲವೊಂದನ್ನು ಉಳಿಸಿಹೋಗುತ್ತಾರೆ. ಪ್ರೇಕ್ಷಕರಿಗೆ ಇದು ದೊಡ್ಡ ಬೋನಸ್ ಎನ್ನಬಹುದು.
ಟೆಕ್ನಿಕಲಿ ಸ್ಟ್ರಾಂಗ್
‘ಕಬ್ಜ’ ತಾಂತ್ರಿಕವಾಗಿ ಗಟ್ಟಿತನ ಉಳಿಸಿಕೊಂಡಿರುವುದಕ್ಕೆ ನಾಲ್ವರು ಪ್ರಮುಖ ಕಾರಣ. ಛಾಯಾಗ್ರಾಹಕ ಎಜೆ ಶೆಟ್ಟಿ ಮೊದಲ ಯತ್ನದಲ್ಲೇ ತಾನೆಂಥ ಪ್ರತಿಭಾವಂತ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ‘ಕೆಜಿಎಫ್’ ಸಿನಿಮಾದಿಂದ ಹೆಸರು ಮಾಡಿರುವ ಕಲಾ ನಿರ್ದೇಶಕ ಶಿವಕುಮಾರ್ ಅವರು ಇಲ್ಲಿಯೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಹಾಗೆಯೇ, ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತದ ಮೂಲಕ ಒಂದು ಫೀಲ್ ಕಟ್ಟಿಕೊಡಲು ಸಫಲರಾಗಿದ್ದಾರೆ. ಇವರೆಲ್ಲರ ಜೊತೆಗೆ ಮಹೇಶ್ ರೆಡ್ಡಿ ಸಂಕಲನ ಸಿನಿಮಾಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ಅವಧಿಯನ್ನು 136 ನಿಮಿಷಗಳಿಗೆ ತಗ್ಗಿಸಿ, ಸಿನಿಮಾ ಬುಲೆಟ್ ರೈಲಿನ ಸ್ಪೀಡ್ ನಲ್ಲಿ ಸಾಗುವಂತೆ ಮಾಡಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರಿಗಿಂತ ಆ್ಯಕ್ಷನ್ ಪ್ರಿಯರು ಕಬ್ಜ ಸಿನಿಮಾವನ್ನು ಹೆಚ್ಚು ಎಂಜಾಯ್ ಮಾಡಬಹುದು.