ಹೊಯ್ಸಳ ದೊರೆಗಳ ಕಲೋಪಾಸನೆ ಹಾಗೂ ದೈವಭಕ್ತಿಯ ಫಲವಾಗಿ ಕರ್ನಾಟಕ ವಿಶಿಷ್ಟ ಹಾಗೂ ಕಲಾಶ್ರೀಮಂತಿಕೆಯಿಂದ ಕೂಡಿದ ದೇವಾಲಯಗಳ ತವರಾಗಿದೆ. ಆದರೆ ಇಂದು ಹೊಯ್ಸಳ ದೊರೆಗಳು ಕಟ್ಟಿಸಿದ ಅನೇಕ ದೇವಾಲಯಗಳು ಸರ್ಕಾರದ ಅವಕೃಪೆ ಹಾಗೂ ಸ್ಥಳೀಯರ ಅನಾದರದಿಂದಾಗಿ ಅಳಿವಿನ ಅಂಚಿನಲ್ಲಿವೆ. ಇಂಥ ಒಂದು ದೇವಾಲಯಗಳಲ್ಲಿ ಹಾಸನ ಜಿಲ್ಲೆ ದುದ್ದ ಹೋಬಳಿಯ ಹಿರೆಕಡಲೂರಿನ ಚನ್ನಕೇಶವ ದೇವಾಲಯವೂ ಒಂದು.
ಶಾಸನಗಳ ರೀತ್ಯ ಹಿಂದೆ ಈ ಊರಿಗೆ ಅರುಂಧತಿ ಪುರ ಎಂಬ ಹೆಸರಿತ್ತು. ಇಲ್ಲಿ ಹೊಯ್ಸಳರ ಅರಸು 2ನೇ ವೀರ ನರಸಿಂಹನ ಕಾಲದಲ್ಲಿ ಈ ದೇವಾಲಯ ನಿರ್ಮಿಸಲಾಯಿತು. ಈ ದೇಗುಲ ಕೂಡ ಇತರ ಹೊಯ್ಸಳ ದೇವಾಲಯಗಳಂತೆ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಾಣವಾಗಿದೆ. ದೇವಾಲಯದಲ್ಲಿ ಮುಖಮಂಟಪ, ಸುಖನಾಸಿ, ಜಾಲಂದ್ರ, ಭುವನೇಶ್ವರಿ ಹಾಗೂ ಗರ್ಭಗೃಹವಿದೆ. ಗರ್ಭಗೃಹದಲ್ಲಿ ಎರಡು ಅಡಿಯ ಪಾಣಿಪೀಠದ ಮೇಲೆ ಆಳೆತ್ತರದ ಸುಂದರ ಚನ್ನಕೇಶವ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.
ಶಾಂತಸ್ವರೂಪಿಯಾದ ಚನ್ನಕೇಶವನ ಕೈಯಲ್ಲಿರುವ ಶಂಖದಲ್ಲಿ ಶಿಲ್ಪಿ ತನ್ನ ಕಲಾ ನೈಪುಣ್ಯತೆಯನ್ನು ಮೆರೆದಿದ್ದಾನೆ. ಪಾಣಿಪೀಠದಲ್ಲಿ ಗರುಡನ ಚಿತ್ರವಿದೆ.
ಆದರೆ ಇಂದು ದೇಗುಲದ ಸುತ್ತಲೂ ಗಿಡ ಗಂಟಿಗಳು ಬೆಳೆದಿವೆ. ಗೋಪುರ ಮಣ್ಣಿನಿಂದ ಮುಚ್ಚಿಹೋಗಿ ಕುಸಿಯುವ ಸ್ಥಿತಿಯಲ್ಲಿದೆ. ಇಂಥ ಮನೋಹರವಾದ ದೇವಾಲಯವನ್ನು ಸಂರಕ್ಷಿಸಬೇಕು ಎಂದು ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ಮನವಿ ಮಾಡಿದೆ. ಈ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರ ಗಮನವನ್ನೂ ಸೆಳೆಯಲಾಗಿದೆ.
ಇಲ್ಲಿ ಹಿಂದೆ ರಂಗನಾಥ ಸ್ವಾಮಿಯ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿತ್ತು ಎಂಬ ಉಲ್ಲೇಖವಿದೆ. ಆದರೆ, ಇಂದು ಆ ವಿಗ್ರಹ ಕಾಣೆಯಾಗಿದೆ. ಸರ್ಕಾರ, ಮುಜರಾಯಿ ಇಲಾಖೆ, ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ಇನ್ನೂ ನಿರ್ಲಕ್ಷ್ಯ ತೋರಿದರೆ ಇರುವ ದೇವಾಲಯ, ವಿಗ್ರಹ ಹಾಗೂ ಅಮೂಲ್ಯ ಕಲಾ ಸಂಪತ್ತನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಅತ್ಯಗತ್ಯ.