ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಪೋಡುಗಳಾದ ಯರಕನಗದೆ, ಬಂಗ್ಲೆಪೋಡು, ಹೊಸಪೋಡು, ಮುತ್ತುಗದ್ದೆಪೋಡು, ಸೀಗೆಬೆಟ್ಟ, ಕಲ್ಯಾಣಿಪೋಡು, ಮಂಜುಗುಂಡಿ ಪೋಡು ಸೇರಿದಂತೆ ಹಲವು ಕಡೆಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಆತಂಕ ಮೂಡಿಸುತ್ತಿದ್ದ ವಕ್ರದಂತಗಳನ್ನು ಹೊಂದಿದ್ದ ಕಾಡಾನೆ ಮೃತಪಟ್ಟಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಯಳಂದೂರು ವನ್ಯಜೀವಿ ವಲಯದ ಬಾವಿಯಾಣೆ ಶಾಖೆಯ ಕಡಿತಾಳಕಟ್ಟೆ ಗಸ್ತಿನಲ್ಲಿ ತಿರುಗುತ್ತಿದ್ದಾಗ ಇಲ್ಲಿನ ವೀರನಕಾನು ಅರಣ್ಯ ಪ್ರದೇಶದಲ್ಲಿ 50 ರಿಂದ 55 ವರ್ಷ ವಯಸ್ಸಿನ ಗಂಡಾನೆಯೊಂದು ಮೃತಪಟ್ಟಿರುವುದು ಕಂಡು ಬಂದಿದೆ.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಿಆರ್‌ಟಿ ನಿರ್ದೇಶಕ ಶ್ರೀಪತಿ, ಎಸಿಎಫ್ ಪ್ರಕಾಶ್ಕರ್ ಅಕ್ಷಯ್ ಅಶೋಕ್, ಆರ್‌ಎಫ್ಒ ನಾಗೇಂದ್ರ ನಾಯಕ ಹಾಗೂ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಮಲ್ಲೇಶಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಡೀಪುರ ಹುಲಿ ಯೋಜನೆಯ ವೈದ್ಯಾಧಿಕಾರಿ ಮಿರ್ಜಾವಾಸೀಂ ಆನೆಯ ಕಳೇಬರ ಮರಣೋತ್ತರ ಪರೀಕ್ಷೆ ನಡೆಸಿ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ಖಚಿತಪಡಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.