ಮೈಸೂರು: ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದ ಕಾಡಾನೆಯೊಂದು ನ್ಯಾಯಬೆಲೆ ಅಂಗಡಿ ಬಾಗಿಲು ಮುರಿದು ಪಡಿತರ ಧಾನ್ಯ ನಾಶ ಮಾಡಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ತಡರಾತ್ರಿ ಆಹಾರ ಅರಸಿ ಬಂದ ಕಾಡಾನೆ ರೈತರು ಬೆಳೆದ ಬಾಳೆ ಸೇರಿದಂತೆ ಇನ್ನಿತರ ಬೆಳೆ, ಸೋಲಾರ್ ಬೇಲಿಯನ್ನು ನಾಶಪಡಿಸಿದೆ. ನಂತರ ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿಯ ಬಾಗಿಲು ಮುರಿದು ಪಡಿತರ ಧಾನ್ಯ ನಾಶಪಡಿಸಿ, ರಾಗಿ ಚೀಲಗಳನ್ನು ಎಳೆದೊಯ್ದಿದೆ ಎಂದು ತಿಳಿದುಬಂದಿದೆ.
ತಡರಾತ್ರಿ ಇಷ್ಟೆಲ್ಲ ಘಟನೆ ಸಂಭವಿಸಿದ್ದರೂ ಗ್ರಾಮಸ್ಥರ ಗಮನಕ್ಕೆ ಬಂದಿಲ್ಲ. ಇಂದು ಮುಂಜಾನೆ ಬಾಗಿಲು ಮುರಿದಿದ್ದ ನ್ಯಾಯಬೆಲೆ ಅಂಗಡಿ ನೋಡಿ ಕಳ್ಳತನವಾಗಿರಬೇಕೆಂದು ಅಂಗಡಿಯ ಮುಂಭಾಗ ಬಂದಾಗ ಹೆಜ್ಜೆ ಗುರುತು ಕಂಡು ಕಾಡಾನೆ ಎಂದು ಗ್ರಾಮಸ್ಥರು ದೃಢಪಡಿಸಿಕೊಂಡಿದ್ದಾರೆ.
ಘಟನೆಯಿಂದ ಮುನುಗನಹಳ್ಳಿ ಮತ್ತು ಆಸುಪಾಸಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಮುಂದಾಗುವಂತೆ ಆಗ್ರಹಿಸಿದ್ದಾರೆ.
Saval TV on YouTube