ಕಲಬುರ್ಗಿ: ರಾಜ್ಯದಲ್ಲಿ ಲಂಚಕೋರರ ವಿರುದ್ಧ ಲೋಕಾಯುಕ್ತದ ಕಾರ್ಯಾಚರಣೆಗಳು ಮತ್ತಷ್ಟು ತೀವ್ರಗೊಂಡಿದೆ. ಜೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಎಂಬವರು ₹2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಲಬುರ್ಗಿ ನಗರದಲ್ಲಿ ವಿದ್ಯುತ್ ಇಲಾಖೆ (ಜೆಸ್ಕಾಂ)ಗೆ ಸಂಬಂಧಪಟ್ಟಂತೆ ವಿವಿಧ ಕಾಮಗಾರಿಗಳ ಬಿಲ್ ಪಾಸ್ ಮಾಡುವ ಸಲುವಾಗಿ, ಪೂರೈಕೆದಾರರಿಂದ ಲಂಚಕ್ಕೆ ಬೇಡಿಕೆ ಇಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಜೇವರ್ಗಿಯ ಕಂಟ್ರಾಕ್ಟರ್ ಸಾಯಬಣ್ಣ ಪೂಜಾರಿ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಲೋಕಾಯುಕ್ತ ಎಸ್‌ಪಿ ಬಿ.ಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಗೀತಾ ಬೆನಾಳ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಯಿತು. ದಾಳಿಯ ಸಮಯವನ್ನು ನಿಖರವಾಗಿ ಆಯ್ಕೆ ಮಾಡಲಾಯಿತು. ಅಂತಿಮವಾಗಿ ₹2 ಲಕ್ಷ ಹಣ ಲಂಚವಾಗಿ ಸ್ವೀಕರಿಸುತ್ತಿದ್ದ ವೇಳೆ ಶೇಖರ್ ಬಹುರೂಪಿ ಅವರನ್ನು ಲೋಕಾಯುಕ್ತ ತಂಡ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
ಹೆಚ್ಚುವರಿ ಟ್ರಾನ್ಸ್‌ಫಾರ್ಮರ್ (ಟಿಸಿ) ಸ್ಥಾಪನೆ, ಲೈನ್ ಮೆಂಟೈನನ್ಸ್ ಕಾಮಗಾರಿಗಳು, ಹೊಸ ಟಿಸಿ ನಿರ್ಮಾಣ, ಗಂಗಾ ಕಲ್ಯಾಣ ಯೋಜನೆಯಡಿ ನಡೆಯುವ ವಿದ್ಯುತ್ ಕಾಮಗಾರಿಗಳು ಸೇರಿದಂತೆ ಈ ಎಲ್ಲಾ ಯೋಜನೆಗಳ ಬಿಲ್‌ಗಳನ್ನು ಪಾಸ್ ಮಾಡಿಕೊಡಲು ಶೇಖರ್ ಲಂಚದ ಬೇಡಿಕೆ ಇಟ್ಟಿದ್ದು, ತುರ್ತು ಕಾರ್ಯಾಚರಣೆಯಲ್ಲಿ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.














