ಮನೆ ದೇವಸ್ಥಾನ ಹಿರೇ ಹಡಗಲಿಯ ಕಲ್ಲೇಶ್ವರ ದೇವಾಲಯ

ಹಿರೇ ಹಡಗಲಿಯ ಕಲ್ಲೇಶ್ವರ ದೇವಾಲಯ

0

ಬಳ್ಳಾರಿ ಜಿಲ್ಲೆಯ ಹಡಗಲಿಯ ನೈಋತ್ಯಕ್ಕೆ 16 ಕಿಮೀ ದೂರದಲ್ಲಿರುವ ಊರೇ ಹಿರೇಹಡಗಲಿ. ಈ ಊರಿನಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಂದರೆ 9-10ನೇ ಶತಮಾನದಲ್ಲಿ ನಿರ್ಮಿಸಲಾದ ಸುಂದರ ಕಲ್ಲೇಶ್ವರ ದೇವಾಲಯವಿದೆ.

Join Our Whatsapp Group

ಕೆರೆಯ ಪಕ್ಕದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಕಟ್ಟೆ ಬಸವೇಶ್ವರ ದೇವಸ್ಥಾನ ಎಂದೇ ಖ್ಯಾತವಾಗಿದೆ.  ಚಾಳುಕ್ಯ ವಾಸ್ತು ಶೈಲಿಯಲ್ಲಿರುವ ದೇವಾಲಯದ ಬಾಗಿಲುಗಳು ಮತ್ತು ಹೊರಗೋಡೆಗಳು ಸುಂದರ ಕೆತ್ತನೆಗಳಿಂದ ಕೂಡಿವೆ.

ನಕ್ಷತ್ರಾಕಾರದ ಜಗಲಿಯ ಮೇಲೆ, ಸುಂದರ ಕೆತ್ತನೆಯಿಂದ ಕೂಡಿದ ಕಂಬಗಳ ಮುಖಮಂಟಪ, ಸುಖನಾಸಿ, ಭುವನೇಶ್ವರಿ, ಅಂತರಾಳ ಹಾಗೂ ಗರ್ಭಗೃಹವನ್ನೊಳಗೊಂಡ ಈ ದೇವಾಲಯದ ಹೊರಭಿತ್ತಿಗಳಲ್ಲಿ ಹಾಗೂ ಕಂಬಗಳಲ್ಲಿ ಸುಂದರವಾದ ಕಲಾತ್ಮಕ ಕೆತ್ತನೆ ಇದೆ. ಅರೆ ಗೋಪುರಗಳು, ಅರೆಕಂಬಗಳು ಹಾಗೂ ಲತಾಸುರಳಿಗಳ ಪಟ್ಟಿಕೆಗಳ ಶಿಲಾಲಂಕಾರಗಳು, ಸಿಂಹಲಾಂಛನ ಮನಸೆಳೆಯುತ್ತವೆ.

ಇಂದಿಗೂ ಕಲ್ಯಾಣ ಚಾಲುಕ್ಯರ ಶಿಲ್ಪ ಕಲಾವೈಭವಕ್ಕೆ ಸಾಕ್ಷಿಯಾಗಿರುವ ಈ ದೇವಾಲಯವನ್ನು ಪ್ರಾಚ್ಯವಸ್ತು ಇಲಾಖೆ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ, ಪೋಷಿಸಿದೆ.  ದೇವಾಲಯದ ಸುತ್ತ ಸುಂದರ ಉದ್ಯಾನ ನಿರ್ಮಿಸಲಾಗಿದ್ದು, ಹಚ್ಚಹಸುರಿನ ಹುಲ್ಲಹಾಸು ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಏಕಕೂಟವಾದ ಈ ದೇವಾಲಯದ ಮೇಲ್ಗೋಪುರದ ಒಂದು ಭಾಗಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ದುರಸ್ತಿ ಮಾಡಲಾಗಿದೆ.

ಪ್ರತಿವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ. ಇದು ಕಟ್ಟೆ ಬಸವೇಶ್ವರ ರಥೋತ್ಸವ ಎಂದೇ ಖ್ಯಾತಿ ಪಡೆದಿದೆ.