ಮನೆ ರಾಜ್ಯ ಕಮಲ್ ಹಾಸನ್ ಕ್ಷಮೆ ಕೇಳದೇ ಹೋದರೆ ಬ್ಯಾನ್ ಮಾಡಬೇಕು: ಸಚಿವ ಶಿವರಾಜ್ ತಂಗಡಗಿ ಆಕ್ರೋಶ

ಕಮಲ್ ಹಾಸನ್ ಕ್ಷಮೆ ಕೇಳದೇ ಹೋದರೆ ಬ್ಯಾನ್ ಮಾಡಬೇಕು: ಸಚಿವ ಶಿವರಾಜ್ ತಂಗಡಗಿ ಆಕ್ರೋಶ

0

ಬೆಂಗಳೂರು: “ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ” ಎಂಬ ನಟ ಕಮಲ್ ಹಾಸನ್ ಅವರ ವಿವಾದಾಸ್ಪದ ಹೇಳಿಕೆಗೆ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಕೂಡಲೇ ಕರ್ನಾಟಕದ ಜನತೆ ಮತ್ತು ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ಸಿನಿಮಾಗಳನ್ನು ನಿಷೇಧಿಸಲು ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಒತ್ತಾಯ ಮಾಡಲಾಗುತ್ತದೆ ಎಂದು ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ನೆಲ ಜಲದ ಬಗ್ಗೆ ಯಾರೇ ಆಗಿರಲಿ ಹಗುರವಾಗಿ ಮಾತನಾಡಿದರೆ ಸಹಿಸುವಂತಿಲ್ಲ. ಕಮಲ್ ಹಾಸನ್ ನೀಡಿದ ಹೇಳಿಕೆ ತಪ್ಪು. ಅವರು ತಕ್ಷಣ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಅದು ಅವರ ನೈತಿಕ ಹೊಣೆಗಾರಿಕೆಯಾಗಿದೆ” ಎಂದು ಹೇಳಿದರು.

ಮುಂದುವರೆದು, “ಹಿಂದೆ ಇದೇ ರೀತಿಯಾಗಿ ಗಾಯಕ ಸೋನು ನಿಗಮ್ ಅವರು ಕನ್ನಡದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾಗ ಕ್ಷಮೆ ಕೇಳಿದ ಉದಾಹರಣೆ ಇದೆ. ಈಗ ಕೂಡ ಕಮಲ್ ಹಾಸನ್ ಅವರು ಕ್ಷಮೆ ಕೇಳಿ, ತಮ್ಮ ತಪ್ಪು ಒಪ್ಪಿಕೊಳ್ಳಬೇಕು” ಎಂದು ಹೇಳಿದರು.

ಅದಷ್ಟೇ ಅಲ್ಲ, ಈ ಹೇಳಿಕೆಯ ಸಂದರ್ಭದಲ್ಲಿ ಕಮಲ್ ಹಾಸನ್ ಅವರ ಪಕ್ಕದಲ್ಲೇ ಇದ್ದ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಕೂಡ ಯಾವುದೇ ಪ್ರತಿಕ್ರಿಯೆ ನೀಡದಿರುವುದಕ್ಕೆ ತಂಗಡಗಿ ಅಸಮಾಧಾನ ವ್ಯಕ್ತಪಡಿಸಿದರು. “ಡಾ. ರಾಜ್‌ಕುಮಾರ್ ಅವರ ಮಗನಾಗಿ ಶಿವರಾಜ್ ಕುಮಾರ್ ಅವರು ಈ ಹೇಳಿಕೆಯನ್ನು ಕೂಡಲೇ ಖಂಡಿಸಬೇಕಾಗಿತ್ತು. ಈಗಲಾದರೂ ಅವರು ಸ್ಪಷ್ಟವಾಗಿ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಬೇಕು” ಎಂದು ಹೇಳಿದರು.

ಕಮಲ್ ಹಾಸನ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ದರೆ, ನಾನೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಷೇಧಿಸಲು ಒತ್ತಾಯಿಸುತ್ತೇನೆ ಎಂದು ತಂಗಡಗಿ ಹೇಳಿದರು. “ಇದೊಂದು ಭಾಷೆಯ ಅಸ್ತಿತ್ವ ಮತ್ತು ಗೌರವದ ವಿಷಯ. ಯಾರೇ ಆಗಿರಲಿ, ಕನ್ನಡವನ್ನು ನಿಂದಿಸುವ ಮಾತುಗಳನ್ನು ಸಹಿಸೋದಿಲ್ಲ” ಎಂದು ಅವರು ಖಡಕ್ ನಿಲುವು ತಾಳಿದರು.