ಮನೆ ಸುದ್ದಿ ಜಾಲ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆ ತಂದವರು ಕನಕದಾಸರು: ಡಾ. ಕೆ.ವಿ.ರಾಜೇಂದ್ರ

ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆ ತಂದವರು ಕನಕದಾಸರು: ಡಾ. ಕೆ.ವಿ.ರಾಜೇಂದ್ರ

0

ಮೈಸೂರು: ಕಾಗಿನೆಲೆ ಆದಿಕೇಶವ ಎಂಬ ಅಂಕಿತದೊಂದಿಗೆ ಕೀರ್ತನೆಗಳು ಉಪಭೋಗಗಳನ್ನು  ಮಾಡಿ  500 ವರ್ಷಗಳ ಹಿಂದೆ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಪರಿವರ್ತನೆಗಳನ್ನು ತಂದಂತಹ ರಾಷ್ಟ್ರೀಯ ಸಂತಕವಿ ಎಂಬ ಖ್ಯಾತಿ ಪಡೆದ ಕನಕದಾಸರ ಐದು ಶತಮಾನಗಳ ಹಿಂದಿನ ಮಾತುಗಳು ಇಂದಿಗೂ ಅನ್ವಯಿಸುತ್ತದೆ ಎಂದರೆ ತಪ್ಪಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಕನಕದಾಸ ಜಯಂತ್ಯೋತ್ಸವ ಸಮಿತಿ ಸಹಯೋಗದಲ್ಲಿ  ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ದಾಸ ಶ್ರೇಷ್ಠ ಶ್ರೀ ಕನಕದಾಸ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ನಾವು ಅಸಮಾನತೆ, ಆರ್ಥಿಕ ಮತ್ತು ಸಾಮಾಜಿಕ ವ್ಯತ್ಯಾಸಗಳು ಹಾಗೂ ಇಂದು ಯುವಕರನ್ನು ರೊಚ್ಚಿಗೆಬ್ಬಿಸುವ ಕೆಲವೊಂದು ಸನ್ನಿವೇಶಗಳು ಬರುತ್ತಿರುವ ಸಂದರ್ಭದಲ್ಲಿ ಇದಕ್ಕೆ ಪರಿಹಾರವಾಗಿ ಒಂದು ದಾರಿದೀಪವಾಗಿ ಕನಕದಾಸರು ಹೇಳಿರುವ ಕೀರ್ತನೆಗಳು ಬಹಳ ಪ್ರಮುಖವಾದವು ಎಂದರು.

ಜ್ಞಾನವೆಂಬುದು ಯಾವ ವ್ಯಕ್ತಿಯ ಸ್ವತ್ತಲ್ಲ ಯಾವುದೇ ಜಾತಿ-ಧರ್ಮದವರಾದರು ಸಹ ಅರಿವೇ ಗುರು ಎಂಬುದನ್ನು ರೂಡಿಸಿಕೊಂಡು ಜ್ಞಾನಾರ್ಜನೆ ಮಾಡುವುದರ ಮೂಲಕ  ಎಲ್ಲಾ ವರ್ಗದವರು ದೇವರನ್ನು ಕಾಣಬಹುದು ಎಂದು ತೋರಿಸಿಕೊಟ್ಟ ದಾರ್ಶನಿಕ ಸಂತ ಕವಿ ಕನಕದಾಸರು ಎಂದು ತಿಳಿಸಿದರು.

ನಂತರ ಮುಖ್ಯ ಭಾಷಣಕಾರ ರಾದ ಡಾ.ಚಿಕ್ಕಮಗಳೂರು ಗಣೇಶ್‌ ಮಾತನಾಡಿ ನಮ್ಮ ನಾಡು, ದೇಶ ಎಂದರೆ ಸರ್ವಜನಾಂಗಗಳ ಶಾಂತಿಯ ತೋಟ,ಕವಿ,ಋಷಿ, ಸಂತರು ನಮ್ಮ ನಾಡನ್ನು ಸದಾಕಾಲ ಸರ್ವಜನಾಂಗಗಳ ಶಾಂತಿಯ ತೋಟವಾಗಿ ಕಾಣಲು ಬಯಸಿದರು  ಎಂದು ತಿಳಿಸಿದರು.

ಕನಕದಾಸರು ಭಕ್ತಿ ಎನ್ನುವಂತ ಖಾಸಗಿ ವಿಚಾರವನ್ನು ಸಮಾಜದ ಬದಲಾವಣೆ ಅಸ್ತ್ರವಾಗಿ ಪ್ರಯೋಗಿಸಿದರು ಎಂದು ತಿಳಿಸಿದರು.

ಕನಕದಾಸರು ಭಕ್ತಿ ಎಂಬ ಖಾಸಗಿ ವಿಚಾರವನ್ನು ಸಮಾಜ ಬದಲಾವಣೆಯ ಅಸ್ತ್ರವಾಗಿ ಪ್ರಯೋಗಿಸಿದ್ದರು. ಭಕ್ತಿ ಎಂಬದಕ್ಕೆ ಸಂಸ್ಕೃತದಲ್ಲಿ ಭಕ್ತಿ ಪರಮ ಪ್ರೇಮಾ  ಅಂದರೆ ಪರಮ ಪ್ರೀತಿ, ಜೀವ ಪ್ರೀತಿ, ಜೀವನ ಪ್ರೀತಿ.  ಯಾರಿಗೆ ಜೀವನ ಪ್ರೀತಿ ಇರುತ್ತದೆ, ನಿಸರ್ಗದ ಮೇಲೆ ಪ್ರೀತಿ ಇರುತ್ತದೆ, ಆತ್ಮಸಾಕ್ಷಿಯ ಮೇಲೆ ನಂಬಿಕೆ ಇರುತ್ತದೆ ಅವರು ಈ ನಾಡನ್ನು ಶಾಂತಿಯಬೀಡಾಗಿ ಕಟ್ಟುವ ಕನಸು ಕಾಣಬಹುದು ಎಂದು ತಿಳಿಸಿದರು.

ಕನಕದಾಸರು ಭಕ್ತಿಯನ್ನು ಕೇವಲ ಭಕ್ತಿಯಾಗಿಸದೆ. ನಮ್ಮ ನಾಡಿನ ಹಾಗೂ ನೆಲದ ಹಲವು ರೋಗರುಜಿನೆಗಳನ್ನ ವಾಸಿಮಾಡುವ ಔಷಧಿಯನ್ನಾಗಿ ಬಳಸಿದರು. ನಮಗೆ ಬೇಕಿರುವುದು ದೇವರು ಮತ್ತು ಭಕ್ತರ ನಡುವೆ ಸೇತುವೆ ನಿರ್ಮಿಸುವ ರಾಯಭಾರಿಗಳು. ಅಂತಹ ಕನ್ನಡ ನೆಲದ ಸಾಂಸ್ಕೃತಿಕ ರಾಯಭಾರಿ ಕನಕದಾಸರು. ಹಾಗಾಗಿಯೇ, ಭಕ್ತರ ಪರವಾಗಿ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ, ಕೂಗಿದರು ಧನಿ ಕೇಳಲಿಲ್ಲವೇ?’ ಎಂದು ಹಾಡಿದರು ಎಂದರು.

ನಂತರ ಮಾತನಾಡಿದ ಕನಕದಾಸರ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಎಂ.ಕೆ.ಸೋಮಶೇಖರ್ ಅವರು ಕನಕದಾಸರು ಜಾತಿ ಅಸಮಾನತೆ ವಿರುದ್ಧ ಹೋರಾಟ ಮಾಡಿ, ಸಮಾನತೆಗಾಗಿ ಶ್ರಮಿಸಿದರು. ಜಾತಿ-ಜಾತಿಗಳ ನಡುವಿನ ಗೋಡೆಗಳನ್ನು ಕೆಡವಲು ಪ್ರಯತ್ನ ಮಾಡಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ನಾನಾ ಕಾರಣಗಳಿಂದ ಈ ಗೋಡೆಗಳು ಗಟ್ಟಿಯಾಗುತ್ತಿವೆ. ವಿದ್ಯಾವಂತರು ಮೌಢ್ಯದತ್ತ ಸಾಗುತ್ತಿದ್ದಾರೆ ಎಂದು ಹೇಳಿದರು.

ಕನಕದಾಸರು ಪ್ರಭುತ್ವ ಮತ್ತು ದೇವರನ್ನು ಪ್ರಶ್ನಿಸುವ ಮನೋಭಾವವನ್ನು ಹೊಂದಿದ್ದರು. ಪ್ರಸ್ತುತ ದಿನಗಳಲ್ಲಿ ಸತ್ಯ ಹೇಳಿದರೆ ಮತ್ತು ಪ್ರಶ್ನಿಸಿದರೆ ಅವರನ್ನು ವಕ್ರ ದೃಷ್ಟಿಯಲ್ಲಿ ನೋಡಲಾಗುತ್ತದೆ. ಪ್ರಶ್ನಿಸುವ ಧೈರ್ಯವನ್ನು ಮತ್ತು ವೈಚಾರಿಕ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಾದ ಎಂ.ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪಾ, ನಗರ ಪಾಲಿಕೆ ಸದಸ್ಯ ಗೋಪಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್, ನಗರ ಪಾಲಿಕೆ ಉಪಕಾರ್ಯದರ್ಶಿ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಮೇಯರ್ ಚಿಕ್ಕಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಶಂಕರ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು, ಮುಖಂಡರಾದ ಕೆ.ಎಸ್.ಶಿವರಾಂ, ಬ್ಯಾಂಕ್ ಪುಟ್ಟಸ್ವಾಮಿ, ವಿಶ್ವ, ರಮೇಶ್, ಮಹದೇವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.