ಮೈಸೂರು :- ಕನಕದಾಸರ ವಿಚಾರಧಾರೆಗಳು ಸಾರ್ವತ್ರಿಕವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಶಿಷ್ಟಾಚಾರದಂತೆ ಕನಕದಾಸರ ಜಯಂತೋತ್ಸವ ಆಚರಣ ಸಮಿತಿಯ ಸಹಯೋಗದಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಇಂದು ನಗರದ ಜಿಲ್ಲಾ ಪಂಚಾಯತ್ ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೆಂಬರ್ 30ರಂದು ಬೆಳಿಗ್ಗೆ 9:00ಗೆ ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಕಲಾಮಂದಿರ ತಲುಪುವುದು ಹಾಗೂ ಕರ್ನಾಟಕ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕನಕದಾಸ ಜಯಂತಿ ಮಹೋತ್ಸವ ಸಮಿತಿಯಿಂದ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾತಂಡಗಳು, ಜಿಲ್ಲಾ ಕಲಾ ತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವವು. ಕಾರ್ಯಕ್ರಮಕ್ಕೆ ಸರ್ಕಾರದ ಮುಖ್ಯಮಂತ್ರಿಗಳು ಆಗಮಿಸುವ ನಿರೀಕ್ಷೆಯಿದ್ದು ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಯೋಜಿಸಲಾಗುವುದು ಎಂದು ತಿಳಿಸಿದರು.
ಮೆರವಣಿಗೆ ಹೊರಡುವ ಮುನ್ನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕನಕದಾಸರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಸಲ್ಲಿಸಲಾಗುವುದು. ಪೊಲೀಸ್ ಬ್ಯಾಂಡ್, ಕೀರ್ತನೆ ಹಾಗೂ ಭಜನಾ ತಂಡಗಳು ಭಾಗವಹಿಸಲಿದ್ದು, ಮೆರವಣಿಗೆಯಲ್ಲಿ ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಲು ರಸ್ತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದ ಫ್ಲೆಕ್ಸ್ ಹಾಕುವ ಕುರಿತು ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮ ನಡೆಯುವ ಸ್ಥಳದ ಹೊರ ಭಾಗದಲ್ಲಿ ವ್ಯವಸ್ಥಿತವಾಗಿ ಫ್ಲೆಕ್ಸ್ ಗಳನ್ನು ಹಾಕಲು ಅವಕಾಶ ಕಲ್ಪಿಸಲಾಗುವುದು. ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ನಗರದ ಸೌಂದರ್ಯ ಹಾಳು ಮಾಡುವ ರೀತಿಯಲ್ಲಿ ಯಾವುದೇ ರೀತಿಯ ಫ್ಲೆಕ್ಸ್ ಗಳನ್ನು ಹಾಕಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನಕದಾಸರ ಜಯಂತೋತ್ಸವ ಪದಾಧಿಕಾರಿಗಳು ಮಾತನಾಡಿ ಕಾರ್ಯಕ್ರಮದ ಅಂಗವಾಗಿ ಕನಕದಾಸರ ಕುರಿತು ನಾಟಕ ಪ್ರದರ್ಶನ, ಕನಕ ಪುತ್ಥಳಿ, ಕನಕದಾಸರ ಹಾಡುಗಳ ಕ್ಯಾಸೆಟ್ ಬಿಡುಗಡೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಸನ್ಮಾನ ಕಾರ್ಯಕ್ರಮ, ಕೀರ್ತನೆಗಳ ಗೀತ ಗಾಯನ ಹಾಗೂ ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕನಕದಾಸರ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಎಸ್ ಟಿ ಸೋಮಶೇಖರ್, ಪದಾಧಿಕಾರಿಗಳಾದ ಎಂ ಪುಟ್ಟಸ್ವಾಮಿ, ಎಂ ಶಿವಣ್ಣ, ಬಿ.ಸುಬ್ರಹ್ಮಣ್ಯ, ಜೆ.ಜೆ ಆನಂದ, ಟಿ.ಬಿ ಚಿಕ್ಕಣ್ಣ, ಪಾಪಣ್ಣ, ದೊಳ್ಳೇ ಗೌಡ, ಎಂ ಮಹಾದೇವೆಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.