ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್‌ರವರ ಪುತ್ಥಳಿಯನ್ನು ಶನಿವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಜಿ ಶಾಸಕ ಎನ್. ಮಹೇಶ್ ನಳಂದ ಬುದ್ಧ ವಿಹಾರದ ಬುದ್ಧರತ್ನ ಬಂತೇಜಿ ಸೇರಿದಂತೆ ಹಲವರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ನಂತರ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಮತ್ತು ಯುವಕ ಸಂಘದ ವತಿಯಿಂದ ನಡೆದ ಅಂಬೇಡ್ಕರ್‌ರ ೧೩೪ ನೇ ಜನ್ಮ ದಿನಾಚರಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್‌ರ ತತ್ವಾದರ್ಶಗಳ ಪಾಲನೆಯನ್ನು ನಾವು ಕಡ್ಡಾಯವಾಗಿ ಎಲ್ಲರೂ ಚಾಚು ತಪ್ಪದೆ ಮಾಡಬೇಕು. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮೀಕ್ಷೆಗೆ ಮುಂದಾಗಿದೆ. ಭಾನುವಾರ ಜಿಲ್ಲಾ ಕೇಂದ್ರವಾದ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಛಲವಾದಿ ಮಹಾಸಭಾದ ವತಿಯಿಂದ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ, ಬಲಗೈ, ಹೊಲೆಯ ಸೇರಿದಂತೆ ಇತರೆ ಹತ್ತಾರು ಹೆಸರುಗಳಿಂದ ನಮ್ಮ ಸಮುದಾಯವನ್ನು ಕರೆಯಲಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಸಮೀಕ್ಷೆ ನಡೆಯಲಿದೆ. ಆಗ ನಮ್ಮ ಸಮುದಾಯದ ಜನರು ತಮ್ಮ ಮುಂದಿನ ಪೀಳಿಗೆಗಾಗಿ ಸರಿಯಾಗಿ ಜಾತಿಯನ್ನು ನಮೂದಿಸುವುದು ಅವಶ್ಯಕವಾಗಿದೆ. ಹಾಗಾಗಿ ಈ ಸಮುದಾಯದ ಪ್ರತಿಯೊಬ್ಬರೂ ತಪ್ಪದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಭಾಷಣಕಾರ ಭೋಗಾಪುರ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಅಂಬೇಡ್ಕರ್ ತಮ್ಮ ೬೫ ವರ್ಷಗಳ ಜೀವಿತಾವಧಿಯಲ್ಲಿ ತಮ್ಮ ಜೀವನವನ್ನು ತುಳಿತಕ್ಕೊಳಗಾದ ನಮ್ಮ ಸಮುದಾಯಗಳಿಗೆ ಮೀಸಲಿಟ್ಟಿದ್ದರು. ಆದರೆ ಇವರನ್ನು ಪ್ರತಿಮೆಗಳಲ್ಲಿ ಕಾಣುವ ಮನೋವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇವರನ್ನು ಮನೆಗಳಲ್ಲಿ ಪೂಜಿಸುವ ಕೆಲಸವಾಗಬೇಕು. ಇವರು ಹಾಕಿಕೊಟ್ಟ ಶಿಕ್ಷಣ, ಸ್ವಾಭಿಮಾನ ಹಾಗೂ ಪಂಚಶೀಲ ಪಾಲನೆಯನ್ನು ನಮ್ಮ ಸಮುದಾಯ ಮಾಡಬೇಕು. ದೇಶದಲ್ಲಿ ೧ ಕೋಟಿ ೨೫ ಲಕ್ಷ ಅಂಬೇಡ್ಕರ್ ಪ್ರತಿಮೆಗಳನ್ನು ನಮ್ಮ ದೇಶದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ನಮ್ಮ ಸಮುದಾಯ ಇನ್ನೂ ಕೂಡ ಹಾಗೆಯೇ ಇದೆ. ಇದಕ್ಕೆ ಕಾರಣ ಅವರು ಹಾಕಿಕೊಟ್ಟ ಮಾರ್ಗಗಳ ಪಾಲನೆ ನಾವು ಮಾಡದಿರುವುದೇ ಕಾರಣವಾಗಿದೆ. ಹಾಗಾಗಿ ಈ ಮಾರ್ಗದಲ್ಲಿ ನಡೆಯುವ ಕೆಲಸವನ್ನು ಮಾಡಬೇಕು ಎಂದರು.
ಮಾಜಿ ಶಾಸಕ ಎನ್. ಮಹೇಶ್ ಮಾತನಾಡಿ, ಅಂಬೇಡ್ಕರ್ ನಮಗೆ ಒಂದು ಧ್ಯೇಯವಾಗಬೇಕು, ಒಂದು ಗುರಿಯಾಗಬೇಕು, ಅಂಬೇಡ್ಕರ್ ಸಂವಿಧಾನದ ಮೂಲಕ ನಮಗೆ ಕೊಟ್ಟ ಮತದಾನದ ಹಕ್ಕು ಹಾಗೂ ಇಲ್ಲಿ ನೀಡಿರುವ ಸೌಲಭ್ಯಗಳಿಂದ ೧೯೫೧ ರಲ್ಲಿ ನಮಗಿದ್ದ ಸಾಕ್ಷರತೆ ಪ್ರಮಾಣ ಶೆ. ೬ ರಿಂದ ಇಂದು ಶೇ. ೬೫ ಕ್ಕೇರಿದೆ. ಇದು ಇನ್ನೂ ಕೂಡ ಹೆಚ್ಚಬೇಕು. ನಮ್ಮ ಮಕ್ಕಳು ಉತ್ತಮವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಉನ್ನತ ಮಟ್ಟದ ವ್ಯಾಸಂಗ ಮಾಡಿ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಆಶಿಸಿದರು.
ನಳಂದ ಬುದ್ಧ ವಿಹಾರದ ಬೋಧಿ ರತ್ನ ಬಂತೇಜಿ ಆಶೀರ್ವಚನ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ, ಪಟೇಲ್ ಮಹೇಶ್, ಕಂದಹಳ್ಳಿ ಮಹೇಶ್, ಪಪಂ ಸದಸ್ಯ ಮಹೇಶ್, ಶಂಕರಮೂರ್ತಿ, ಚೋರನಹಳ್ಳಿ ಶಿವಣ್ಣ, ಜೆ. ಶ್ರೀನಿವಾಸ್, ಸಿ. ರಾಜಣ್ಣ, ಕೇಶವಮೂರ್ತಿ, ಭಾಗ್ಯಲಕ್ಷ್ಮಿ, ಶಾಂತಮ್ಮ, ರಾಜಮ್ಮ, ಕಾರ್ಯಕ್ರಮವನ್ನು ಕಂದಹಳ್ಳಿ ನಾರಾಯಣ ನಿರೂಪಿಸಿದರು. ಗ್ರಾಮದ ಯಜಮಾನರು, ಯುವಕ, ವಿದ್ಯಾರ್ಥಿ, ಮಹಿಳಾ ಸಂಘದ ಸದಸ್ಯರು ಗ್ರಾಮಸ್ಥರು, ಮುಖಂಡರು ಸೇರಿದಂತೆ ಅನೇಕರು ಇದ್ದರು.














