ಬೆಂಗಳೂರು (Bengaluru)- ʻಹಿಂದಿ ರಾಷ್ಟ್ರ ಭಾಷೆʼ ಎಂಬ ಅಜಯ್ ದೇವಗನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ನಿರ್ದೇಶಕ (Director) ಯೋಗರಾಜ್ ಭಟ್ (Yogaraj Bhatt) ರಾಷ್ಟ್ರದ ಸಮಸ್ಯೆ ಬಗ್ಗೆ ನನ್ನ ಕೇಳಿದರೆ ಹೇಗೆ? ಎಂದಿದ್ದರು.
ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಇದೀಗ ಈ ಹೇಳಿಕೆ ವಿಚಾರವಾಗಿ ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ʻʻನಮಸ್ತೆ, ರಾಷ್ಟ್ರೀಯ ಭಾಷೆ ವಿವಾದದ ವಿಚಾರವಾಗಿ ಮಾಧ್ಯಮ ಮಿತ್ರರು ಪ್ರಶ್ನಿಸಿದಾಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೇ ಹೊರತು ಹಿಂದಿಯೇ ರಾಷ್ಟ್ರ ಭಾಷೆ ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನದ ಪ್ರಕಾರವಾಗಿ ರಾಷ್ಟ್ರಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತ ಚರ್ಚೆ ಎಲ್ಲಿಗೂ ಹೋಗಿ ಮುಟ್ಟುವುದಿಲ್ಲ. ಹಾಗಾಗಿ, ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಅಂದ ಮಾತ್ರಕ್ಕೆ ಅದು ರಾಷ್ಟ್ರ ಭಾಷೆ ಆಗುವುದಿಲ್ಲ. ಈ ಕಾರಣಕ್ಕಾಗಿ ನಾನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಗನ್ನಡದಲ್ಲಿ ಅಂತ್ಯ ಹಾಡಲೆತ್ನಿಸಿದ್ದೇನೇ ಹೊರತು ಬೇರೇನು ಇಲ್ಲ. ನನ್ನ ಕನ್ನಡ, ನನ್ನ ಕನ್ನಡ ಭಾಷಾಭಿಮಾನ, ಕನ್ನಡ ಸೇವೆ, ಕನ್ನಡತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ. ಹಾಗಾಗಿ, ನಾನು ನನ್ನ ಸನ್ಮಿತ್ರರಾದ ಸುದೀಪ್ ಸಾಹೇಬರ ಪರವಾಗಿ ಎಂದು ತಮಗೆಲ್ಲ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ–ಸಿರಿಗನ್ನಡಂ ಗೆಲ್ಗೆʼʼ ಎಂದು ಪೋಸ್ಟ್ ಮಾಡಿದ್ದಾರೆ.
‘ಗರಡಿ’ಚಿತ್ರದ ಸುದ್ದಿಗೋಷ್ಠಿ ವೇಳೆ ಮಾಧ್ಯಮದವರು ಅಜಯ್ ದೇವಗನ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದ್ದರು. ಇದಕ್ಕೆ ಯೋಗರಾಜ್ ಭಟ್ ಅವರು, ʻನನಗೆ ಸಂಬಂಧಿಸಿದ ವಿಷಯವನ್ನೇ ನೆಟ್ಟಗೆ ಮಾತನಾಡಲು ಬರುವುದಿಲ್ಲ. ಇನ್ನು, ರಾಷ್ಟ್ರದ ಸಮಸ್ಯೆ ತಂದು ನನ್ನ ಕೇಳಿದರೆ ಹೇಗೆ? ʻನಾನು ಕನ್ನಡ ಪಂಡಿತನೂ ಹೌದು. ಹಿಂದಿ ಪಂಡಿತನೂ ಹೌದುʼ ಎಂದಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.