ಮೈಸೂರು(Mysuru): ಕನ್ನಡ ಚಳವಳಿ ಮೊದಲು ಆರಂಭವಾದದ್ದು ಮೈಸೂರಿನಲ್ಲಿ ಎಂದು ಸಮಾಜವಾದಿ ಕೋಣಂದೂರು ಲಿಂಗಪ್ಪ ಸ್ಮರಿಸಿದರು.
ಇಲ್ಲಿನ ನಟರಾಜ ಸಭಾ ಭವನದಲ್ಲಿ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟವು ಬುಧವಾರ ಆಯೋಜಿಸಿದ್ದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಡಿದಾಳು ಶಾಮಣ್ಣ, ಸುಂದರೇಶ್, ಐತಾಳ ಅವರೊಂದಿಗೆ ‘ಕನ್ನಡ ಯುವಜನ ಸಭಾ’ ಸ್ಥಾಪಿಸಿದೆವು. 50–60ರ ದಶಕದಲ್ಲಿ ನಗರದಲ್ಲಿನ ಶೇ 75ರಷ್ಟು ಇಂಗ್ಲಿಷ್ ನಾಮಫಲಕಗಳನ್ನು ತೆಗೆಸಿ ಕನ್ನಡ ಕಡ್ಡಾಯಗೊಳಿಸಲಾಯಿತು. ಆ ನಂತರ ಚಳವಳಿ ರಾಜ್ಯದಾದ್ಯಂತ ವಿಸ್ತರಿಸಿತು ಎಂದು ತಿಳಿಸಿದರು.
ದೇಶದ ಪ್ರಾಥಮಿಕ ಭಾಷೆಗಳಲ್ಲಿಯೇ ಶಿಕ್ಷಣ ಇರಬೇಕೆಂದು ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದ್ದ ಭಾರತೀಯ ವಿಶ್ವವಿದ್ಯಾಲಯಗಳ ಇಂಗ್ಲಿಷ್ ಅಧ್ಯಾಪಕರ ಸಭೆಯಲ್ಲಿ ಕರಪತ್ರ ಹಂಚಿದ್ದೆವು. ಕರಪತ್ರ ಪ್ರಕಟಣೆ ಖರ್ಚಿಗಾಗಿ ಕುವೆಂಪು ₹ 10 ನೀಡಿದ್ದರು. ಕನ್ನಡ ಯುವಜನ ಸಭಾದ ಕಾರ್ಯಗಳ ಹಿಂದೆ ಕುವೆಂಪು ಅವರಿದ್ದರು ಎಂದು ನೆನೆದರು.
ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡು ರಾಜಕಾರಣಿಯಾಗಿರಲಿಲ್ಲ. ಅವರು ರಾಷ್ಟ್ರಕಾರಣಿ. ರಾಜಕಾರಣಿಗಳು ಚುನಾವಣಾ ರಾಜಕೀಯದಲ್ಲಿ ಹಾಗೂ ಗೆಲುವಿಗೆ ತಂತ್ರಗಳಲ್ಲಿ ಮುಳುಗಿದ್ದರೆ, ಗೋಪಾಲಗೌಡರಿಗೆ ರಾಷ್ಟ್ರೀಯ ಪ್ರಜ್ಞೆಯಿತ್ತು ಎಂದು ಹೇಳಿದರು.
ಮೌಲ್ಯಾಧಾರಿತ ರಾಜಕಾರಣದ ಪಾಠವನ್ನು ಕಲಿಸಿ ಹೋದರು. 49ನೇ ವರ್ಷಕ್ಕೇ ಮೃತಪಟ್ಟರೂ, ಅವರ ಬಗ್ಗೆ ಈಗಲೂ ಮಾತನಾಡುತ್ತೇವೆ. ಈಗಿನ ರಾಜಕಾರಣಿಗಳು ಅವರನ್ನು ದಾರಿದೀಪವೆಂದು ಪರಿಗಣಿಸಿ ಆದರ್ಶ ಅನುಸರಿಸಿದರೆ ಬಹಳಷ್ಟು ಬದಲಾವಣೆ ಆಗುತ್ತವೆ ಎಂದರು.
ಸಮಾಜವಾದಿ ಕೋಣಂದೂರು ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಹೊಸಮಠದ ಚಿದಾನಂದ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಮ ಮನೋಹರ ಶಾಂತವೇರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಡಾ.ಎಸ್. ಶಿವರಾಜಪ್ಪ ಇದ್ದರು.