ಅವರಿಬ್ಬರು ಪ್ರೇಮಿಗಳು, ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಹುಡುಗಿ ಕಾಣೆಯಾಗುತ್ತಾಳೆ. ಅವಳ ಹುಡುಕಾಟದಲ್ಲಿದ್ದ ಹುಡುಗನಿಗೆ, ಆಕೆ ಆರು ತಿಂಗಳ ಹಿಂದೆಯೇ ಸತ್ತು ಹೋಗಿದ್ದಾಳೆ ಎಂಬ ವಿಷಯ ತಿಳಿದು ದಿಗ್ಭ್ರಾಂತನಾಗುತ್ತಾನೆ. ಈ ನಿಗೂಢತೆಯಿಂದ ಆರಂಭವಾಗುವ ಕಥೆಯೇ, ಈ ವಾರ ತೆರೆಕಂಡ “ಕಣ್ಣಾಮುಚ್ಚೆ ಕಾಡೇ ಗೂಡೇ’ ಸಿನಿಮಾ.
ಕಥೆಯನ್ನು ನೇರ ದಾರಿಯಲ್ಲಿ ವಿವರಿಸದೇ ಒಂದಿಷ್ಟು ಉಪಕಥೆ, ಫ್ಲಾಶ್ಬ್ಯಾಕ್ ಸನ್ನಿವೇಶಗಳಿಂದ ಹೇಳುವಲ್ಲಿ ನಟರಾಜ್ ಕೃಷ್ಣೇಗೌಡ ತಮ್ಮ ನಿರ್ದೇಶನದಲ್ಲಿ ಕೈಚಳಕ ತೋರಿದ್ದಾರೆ. ಇಲ್ಲಿ ನಿರೂಪಣೆಯ ವೇಗ ಕಡಿಮೆಯಿದ್ದರೂ, ರೋಚಕ ಸನ್ನಿವೇಶಗಳಿಂದ ಕಥೆಗೆ ವೇಗ ಹೆಚ್ಚುತ್ತದೆ. ಸಸ್ಪೆನ್ಸ್ ಹಾಗೂ ಕಾಮಿಡಿ ಎರಡೂ ಸಮಾನಾಂತರವಾಗಿ ಸಾಗುವ ಈ ಚಿತ್ರದಲ್ಲಿ ದೃಶ್ಯದಿಂದ ದೃಶ್ಯಕ್ಕೆ ಪ್ರೇಕ್ಷಕರಲ್ಲಿ ಹೊಸ ಕುತೂಹಲ ಸೃಜಿಸುವುದಂತೂ ಖಂಡಿತ. ಕಥೆಗೆ ತಕ್ಕ ಶೀರ್ಷಿಕೆ, ಶೀರ್ಷಿಕೆಗೆ ತಕ್ಕ ನಿರೂಪಣೆ ಈ ಚಿತ್ರದಲ್ಲಿ ಕಾಣಬಹುದು.
ಕೊಲೆಯಿಂದಲೇ ಆರಂಭವಾಗಿ, ಕೊಲೆಯಿಂದಲೇ ಸಾಗಿ, ಮತ್ತೆ ಕೊಲೆಯಿಂದಲೇ ತಾರ್ಕಿಕ ಅಂತ್ಯ ಕಾಣುತ್ತದೆ ಈ ಕಥೆ. ಇಲ್ಲಿ ಕೊಲೆಯ ಹಿಂದಿನ ಕೊ(ಕ)ಲೆಗಾರ ಯಾರು ಎಂಬುದನ್ನು ಹುಡುಕುವಲ್ಲಿ ಪೋಲೀಸರು ಒಂದುಕಡೆಯಾದರೆ, ಪ್ರೈವೆಟ್ ಡಿಟೆಕ್ಟಿವ್ ಏಜೆಂಟ್ ರಾಮ್ ಒಂದು ಕಡೆ.
ಈ ಕೊಲೆಗಳ ಸುಳಿಯ ನಡುವೆಯೇ ಒಂದು ಪ್ರೇಮಕಥೆ, ಅದರ ಹಿಂದೆ ಒಂದಿಷ್ಟು ಫ್ಲಾಶ್ಬ್ಯಾಕ್ ಕಥೆಗಳು… ಸ್ವಾರ್ಥ, ದ್ವೇಷ, ಸೇಡು, ಪ್ರೀತಿ ಎಲ್ಲದರ ಸಂಗಮವೇ “ಕಣ್ಣಾಮುಚ್ಚೆ ಕಾಡೇ ಗೂಡೇ’ ಸಿನಿಮಾ. ದ್ವಿಪಾತ್ರದಲ್ಲಿ ನಟಿಸಿರುವ ಪ್ರಾರ್ಥನಾ ಸುವರ್ಣ ಕಥೆಯ ಕೇಂದ್ರ ಬಿಂದು.
ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿ, ಕಥೆಗೆ ರೋಚಕತೆ ಒದಗಿಸಿದ್ದಾರೆ. ರಾಘವೇಂದ್ರ ರಾಜ ಕುಮಾರ್ ಅವರ ಪಾತ್ರ ಕಥೆಗೆ ತಿರುವು ನೀಡು ತ್ತದೆ. ನಾಯಕ ಅಥರ್ವ, ಜ್ಯೋತೀಶ್ ಶೆಟ್ಟಿ ಪಾತ್ರ ಗಮನ ಸೆಳೆಯುತ್ತದೆ. ಅರವಿಂದ್ ಬೋಳಾರ್, ವಿರೇಶ್ ಕುಮಾರ್ ಮತ್ತಿತರರು ನಟಿಸಿದ್ದಾರೆ.














