ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಕಣ್ಣಪ್ಪ’ ಫೈನಲಿ ತನ್ನ ಆಕರ್ಷಕ ಟೀಸರ್ ಅನಾವರಣಗೊಳಿಸಿದೆ. ಟಾಲಿವುಡ್ ಸೂಪರ್ ಸ್ಟಾರ್ ಮಂಚು ವಿಷ್ಣು ಮುಖ್ಯಭೂಮಿಕೆಯ ಸಿನಿಮಾವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ.
ಬಹುನಿರೀಕ್ಷಿತ ಚಿತ್ರದಲ್ಲಿ ಅಕ್ಷಯ್ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್ ಮತ್ತು ಶರತ್ ಕುಮಾರ್ ಸೇರಿದಂತೆ ಭಾರತೀಯ ಚಿತ್ರರಂಗದ ಹೆಸರಾಂತರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಂಚು ವಿಷ್ಣು ಅವರ ಡ್ರೀಮ್ ಪ್ರಾಜೆಕ್ಟ್ ಆಗಿ ತಯಾರಾಗುತ್ತಿರುವ ಕಣ್ಣಪ್ಪ ಮುಂದಿನ ತಿಂಗಳು ಏಪ್ರಿಲ್ 25ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.
ಈ ಮೈಥಲಾಜಿಕಲ್ ಡ್ರಾಮಾ ಶಿವಭಕ್ತ ಕಣ್ಣಪ್ಪನ ಪೌರಾಣಿಕ ಭಕ್ತಿ ಕಥೆಯನ್ನು ಆಧರಿಸಿದೆ. ಬಿಡುಗಡೆಗೆ ಎದುರು ನೋಡುತ್ತಿರುವ ಪ್ರೇಕ್ಷಕರು ಚಿತ್ರದ ಅಪ್ಡೇಟ್ಸ್, ಗ್ಲಿಂಪ್ಸ್ಗಾಗಿ ಕಾತರರಾಗಿದ್ದರು. ಫೈನಲಿ, ಮಾರ್ಚ್ 1, ಶನಿವಾರದಂದು ಚಿತ್ರದ ಎರಡನೇ ಟೀಸರ್ ಅನ್ನು ಅನಾವರಣಗೊಳಿಸಲಾಗಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಮಾಧ್ಯಮಗಳಿಗೆ ಟೀಸರ್ ತೋರಿಸಿದ್ದ ಚಿತ್ರತಂಡ, ಇಂದು ಸಿನಿಪ್ರಿಯರಿಗಾಗಿ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಬಿಡುಗಡೆಗೊಳಿಸಿದೆ.
1 ನಿಮಿಷ 24 ಸೆಕೆಂಡುಗಳುಳ್ಳ ಈ ಟೀಸರ್, ಚಿತ್ರದ ಒಂದು ಸಣ್ಣ ನೋಟವನ್ನೊದಗಿಸಿದೆ. ನಾಯಕ ನಟ ಮಂಚು ವಿಷ್ಣು ತಿನ್ನಡು ಎಂಬ ಪಾತ್ರದಲ್ಲಿ ನಟಿಸಿದರೆ, ಪ್ರಭಾಸ್, ಅಕ್ಷಯ್ ಕುಮಾರ್ ಮತ್ತು ಮೋಹನ್ ಲಾಲ್ ಅವರಂತಹ ಜನಪ್ರಿಯ ನಟರು ಚಿತ್ರದ ತಾರಾಗಣದಲ್ಲಿದ್ದಾರೆ. ಅಕ್ಷಯ್ ಶಿವನ ಪಾತ್ರದಲ್ಲಿ, ಪ್ರಭಾಸ್ ರಕ್ಷಕ ರುದ್ರನ ಪಾತ್ರದಲ್ಲಿ ಮತ್ತು ಕಾಜಲ್ ಅಗರ್ವಾಲ್ ದೇವಿ ಪಾರ್ವತಿ ಪಾತ್ರದಲ್ಲಿ ನಟಿಸಿದ್ದಾರೆ.