ಬೆಂಗಳೂರು : ಹೊಂಬಾಳೆ ಫಿಲ್ಮ್ಸ್ ನ ಸೂಪರ್ ಹಿಟ್ ಸಿನಿಮಾ ʼಕಾಂತಾರʼ ಮುಂದುವರೆದ ಭಾಗದ ಕುರಿತು ಮೊದಲಿನಿಂದಲೇ ಹೈಪ್ ಹೆಚ್ಚಿದೆ.
ಕಾಂತಾರ ಯಶಸ್ಸಿನ ಬೆನ್ನಲ್ಲೆ ಕಾಂತಾರ ಪಾರ್ಟ್ 2 ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಅಧಿಕೃತವಾಗಿರಲಿಲ್ಲ. ಇದೀಗ ಈ ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಅವರು ಕಾಂತಾರ ಸೆಕೆಂಡ್ ಪಾರ್ಟ್ ಬರಲಿದ್ದು ಬರವಣಿಗೆ (ಸ್ಕ್ರಿಪ್ಟ್) ಆರಂಭವಾಗಿದೆ ಎಂದು ಖಚಿತಪಡಿಸಿದೆ.
ʼಕಾಂತಾರʼ ಸಿನಿಮಾದ ಎರಡನೇ ಭಾಗದ ಚಿತ್ರೀಕರಣವನ್ನು ರಿಷಬ್ ಅವರು ಜೂನ್ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ.
ಮಳೆಯ ದೃಶ್ಯಗಳು ಸಿನಿಮಾದಲ್ಲಿ ಬೇಕಾಗಿರುವುದರಿಂದ ಜೂನ್ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಪ್ಯಾನ್ ಇಂಡಿಯಾದಲ್ಲಿ ಸಿನಿಮಾವನ್ನು 2024 ರ ಏಪ್ರಿಲ್ ಅಥವಾ ಮೇ ವೇಳೆಗೆ ರಿಲೀಸ್ ಮಾಡುವ ಯೋಜನೆ ನಮ್ಮದು ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನವೊಂದಲ್ಲಿ ಹೇಳಿದ್ದರು.
ಇದೀಗ ಯುಗಾದಿ ಹಬ್ಬದ ದಿನ ( ಮಾ. 22 ರಂದು) ʼಬರವಣಿಗೆಯ ಆದಿʼ ಎಂದು ಪೋಸ್ಟರ್ ಹಂಚಿಕೊಂಡು ಹಬ್ಬದ ಶುಭಾಶಯವನ್ನು ತಿಳಿಸಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಅಮೋಘ ಕತೆಯನ್ನು ನಿಮ್ಮ ಮುಂದೆ ತರಲು ನಾವು ಕೌತುಕದಿಂದ ಕಾಯುತ್ತಿದ್ದೇವೆ ಎಂದು ಹೊಂಬಾಳೆ ಬರೆದುಕೊಂಡಿದೆ.
ʼಕಾಂತಾರ-2ʼ ವಿನ ಬರವಣಿಗೆ ಆರಂಭವಾದ ಬಗ್ಗೆ ಸಿನಿಮಾದ ಅಭಿಮಾನಿಗಳು ಖುಷ್ ಆಗಿದ್ದಾರೆ.














