‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಗಳಿಕೆ ಮಾಡಿದೆ. ಮೊದಲ ದಿನ ಸಿನಿಮಾ ನೋಡಿದವರು ಚಿತ್ರವನ್ನು ಬಲುವಾಗಿ ಮೆಚ್ಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ತಮಿಳುನಾಡು, ಉತ್ತರ ಭಾರತದಲ್ಲಿಯೂ ಸಹ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಮಂದಿ ವಾವ್ ಎಂದಿದ್ದಾರೆ. ಆದರೆ ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ, ಪ್ರೇಕ್ಷಕರಲ್ಲಿ ಮನವಿಯೊಂದನ್ನು ಮಾಡಿದೆ.
ಹೊಂಬಾಳೆ ಫಿಲಮ್ಸ್, ಇನ್ಸ್ಟಾಗ್ರಾಂನಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಸಂದೇಶವೊಂದನ್ನು ಹಂಚಿಕೊಂಡಿದೆ. ಸಿನಿಮಾ ನೋಡಿ ಎಂಜಾಯ್ ಮಾಡಿ ಆದರೆ ಪೈರಸಿ ಬೇಡ ಎಂದು ಹೊಂಬಾಳೆ ಮನವಿ ಮಾಡಿದೆ. ‘ಆತ್ಮೀಯ ಕಾಂತಾರ ಕುಟುಂಬ ಮತ್ತು ಸಿನಿಮಾ ಅಭಿಮಾನಿಗಳೇ, ‘ಕಾಂತಾರ’ ಕೇವಲ ಒಂದು ಸಿನಿಮಾ ಅಲ್ಲ ಅದು ನಮ್ಮ ಸಂಸ್ಕೃತಿ ನಮ್ಮ ನೆಲದ ಕತೆ, ಆರಂಭದಿಂದಲೂ ಈ ಪಯಣ ನಮ್ಮ ಜೊತೆಗೆ ನಿಮ್ಮದೂ ಸಹ. ನಿಮ್ಮ ಅಪಾರ ಪ್ರೀತಿ, ಬೆಂಬಲವೇ ಈ ಚಿತ್ರವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಆ ಋಣ ಯಾವಾಗಲೂ ನಮ್ಮ ಮೇಲೆ ಇರಲಿದೆ. ಈಗ ನಮ್ಮದೊಂದು ವಿನಂತಿ ಈ ಚಿತ್ರದಲ್ಲಿ ತೆರೆಯ ಹಿಂದೆ ಮತ್ತು ಮುಂದೆ ಕೆಲಸ ಮಾಡಿರುವ ಸಾವಿರಾರು ಜನರ ಶ್ರಮವಿದೆ. ಪೈರಸಿಯಿಂದ ಈ ಕನಸನ್ನು ಪೋಲಾಗಲು ಬಿಡಬೇಡಿ, ದಯವಿಟ್ಟು ಚಿತ್ರಮಂದಿರಗಳಲ್ಲಿ ಯಾವುದೇ ಚಿತ್ರದ ದೃಶ್ಯಗಳನ್ನು ಚಿತ್ರೀಕರಣ ಮಾಡಬೇಡಿ ಹಾಗೂ ಹಂಚಿಕೊಳ್ಳಬೇಡಿ, ಸಿನಿಮಾದ ಸಣ್ಣ ದೃಶ್ಯವನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ.
ಸಣ್ಣ ದೃಶ್ಯವೂ ಸಹ ಸಿನಿಮಾದ ಮಾಯೆಯನ್ನು ಮಲಿನ ಮಾಡುತ್ತದೆ. ಸಂಭ್ರಮ ದೊಡ್ಡ ಪರದೆಯಲ್ಲಿಯೇ ಇರಲಿ. ಈ ಅದ್ಭುತ ಪ್ರಯಾಣವನ್ನು ಒಟ್ಟಾಗಿ ಕಾಪಾಡೋಣ, ‘ಕಾಂತಾರ’ದ ಅನುಭವ ಎಂದೆಂದಿಗೂ ಚಿತ್ರರಂಗಕ್ಕೆ ಮೀಸಲಾಗಿರಲಿ’ ಎಂದಿದ್ದಾರೆ.
ಪೈರಸಿ ಎಂಬುದು ಚಿತ್ರರಂಗಕ್ಕೆ ಬಡಿದಿರುವ ಶಾಪ. ಇತ್ತೀಚೆಗಷ್ಟೆ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮುಂಚೆಯೇ ಕೆಲವರು ಹ್ಯಾಕ್ ಮಾಡಿ ಸಿನಿಮಾಗಳನ್ನು ಬಿಡುಗಡೆ ಮಾಡಿಬಿಡುತ್ತಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಈ ಸಮಸ್ಯೆ ಕಾಡುವ ಸಾಧ್ಯತೆ ಇದೆ.
ಹಾಗಾಗಿ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಪೈರಸಿ ವಿಷಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿದೆ. ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ನಲ್ಲಿ ಹರಿದಾಡುತ್ತಿರುವ ಸಣ್ಣ ಪುಟ್ಟ ವಿಡಿಯೋ ತುಣುಕುಗಳನ್ನು ಸಹ ಡಿಲೀಟ್ ಮಾಡಿಸಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿನ್ನೆಯಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿಯೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಗೆ ಬಂದಿದೆ.















