ಯೋಗ ಸಾಧನೆ ಮಾಡಲು ಅರೋಗ್ಯ ಪೂರ್ಣ ದೇಹ ಮತ್ತು ಮನಸ್ಸು ಅತೀ ಅವಶ್ಯಕ. ದೇಹದಲ್ಲಿ ಅತೀ ಹೆಚ್ಚು ಬೊಜ್ಜು ಮತ್ತು ಶ್ಲೇಷ್ಮಗಳು ಶೇಖರಣೆಯಾದಾಗ ಯೋಗ ಸಾಧನೆಗೆ ಅಡ್ಡಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ನಾವು ಯೋಗಿಕ ಕ್ರಿಯೆಗಳನ್ನು ಮಾಡಿ ಅವುಗಳ ಪ್ರಭಾವವನ್ನು ತಗ್ಗಿಸಬಹುದು ಮತ್ತು ಗುಣಪಡಿಸಕೊಳ್ಳಬಹುದು. ಹಠ ಯೋಗದಲ್ಲಿ ದೇಹ ಶುದ್ಧಿಗೆ ಬೇಕಾದ 8 ಕ್ರಿಯೆಗಳನ್ನು ಪ್ರಸ್ತಾಪ ಮಾಡಲಾಗಿದೆ. ಪ್ರಾಣಯಾಮವನ್ನು ಪರಿಣಾಮಕಾರಿಯಾಗಿ ಅಭ್ಯಸಿಸಲು ಶುದ್ಧಿಕ್ರಮಗಳು ಅತಿ ಅವಶ್ಯಕ. ಅವುಗಳಲ್ಲಿ ಒಂದು ಮುಖ್ಯವಾದ ಕ್ರಿಯೆಯೇ ಕಪಾಲಭಾತಿ.
ಕಪಾಲಭಾತಿ ಎಂದರೇನು?
ಕಪಾಲ ಅಂದರೆ ತಲೆ ಬುರುಡೆ ಮತ್ತು ಭಾತಿ ಅಂದರೆ ಹೊಳೆಯುವುದು ಎಂದು ಶಬ್ದಾರ್ಥ. ಇದೊಂದು ಶುದ್ಧಿ ಕ್ರಿಯೆಯಾಗಿ ಯೋಗ ಶಾಸ್ತ್ರಕಾರರು ವಿವರಿಸಿದ್ದಾರೆ ಮತ್ತು ಇದು ಪ್ರಾಣಾಯಾಮವಲ್ಲ. ಈ ಕ್ರಿಯೆಯ ಅಭ್ಯಾಸದಿಂದ ತಲೆಯ ಭಾಗದಲ್ಲಿರುವ ಸೂಕ್ಷ್ಮ ನಾಡಿಗಳು ಶುದ್ಧವಾಗಿ, ರಕ್ತ ಸಂಚಾರ ಉತ್ತಮವಾಗುತ್ತದೆ. ಇದು ಸ್ವಾಭಾವಿಕ ಹೊಳಪನ್ನು ಕೊಟ್ಟು ತಲೆಯ ಆರೋಗ್ಯ ಕಾಪಾಡುತ್ತದೆ. ನಮ್ಮ ಶ್ವಾಸೇಂದ್ರಿಯವಾದ ಮೂಗಿಗೆ ಉಳಿದ ಎಲ್ಲಾ ಜ್ಞಾನೇಂದ್ರಿಯಗಳ ನರ ತಂತು ಜಾಲದ ಸಂಪರ್ಕ ಇರುವುದರಿಂದ ತಲೆಯ ಭಾಗದ ಎಲ್ಲಾ ನಾಡಿಗಳನ್ನು ಶುದ್ಧೀಕರಿಸುವುದರ ಜೊತೆಗೆ ತಲೆಯ ನರ ಮಂಡಲವನ್ನು ಉತ್ತೇಜಿಸುವ ಕಾರ್ಯವನ್ನು ಕಪಾಲಭಾತಿ ಮಾಡುತ್ತದೆ.
ಅಭ್ಯಾಸ ಕ್ರಮ:
ಪದ್ಮಾಸನ, ಸ್ವಸ್ತಿಕಾಸನ ಅಥವಾ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಎರಡು ಹಸ್ತಗಳನ್ನು ಒಳ ಮುಖವಾಗಿ ಇಟ್ಟು ಮಂಡಿಯನ್ನು ಒತ್ತಿ ಬೆನ್ನು ಹುರಿಯನ್ನು ನೆಟ್ಟಗೆ ಇಟ್ಟುಕ್ಕೊಳ್ಳಬೇಕು. ನಂತರ ವೇಗವಾಗಿ ಉಚ್ವಾಸ ಮತ್ತು ನಿಶ್ವಾಸವನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭ್ಯಾಸ ಮಾಡಬೇಕು. ಪ್ರಾರಂಭದಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಅಭ್ಯಾಸ ಮಾಡಿ ನಂತರ ಸಂಖ್ಯೆಯನ್ನು ಹೆಚ್ಚು ಮಾಡುತ್ತ ಹೋಗಬೇಕು.
ಪ್ರಯೋಜನಗಳು:
ಕಪಾಲಭಾತಿಯ ಅಭ್ಯಾಸದಿಂದ ಕಫ ದೋಷದ ವೈಷಮ್ಯದಿಂದ ಬರುವಂತಹ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಮೂಗಿನ ಅಲರ್ಜಿ, ಶೀತ, ಸೈನುಸೈಟಿಸ್, ತಲೆ ಶೂಲೆ(ಮೈಗ್ರೇನ್), ಬೊಜ್ಜಿನ ಸಮಸ್ಯೆಗಳಿಗೆ ಪರಿಣಾಮಕಾರಿ ಅಭ್ಯಾಸವಾಗಿದೆ. ಅಲ್ಲದೆ ಆಲಸ್ಯ, ಜಡತ್ವವನ್ನು ತೊಲಗಿಸಿ ಶರೀರ ಮತ್ತು ಮನಸ್ಸನ್ನು ಸಚೇತಗೊಳಿಸುತ್ತದೆ. ಶ್ವಾಸಕೋಶದ ಮಾಂಸ ಖಂಡಗಳನ್ನು ಶಕ್ತಿಯುತಗೊಳಿಸುವುದರ ಜೊತೆಗೆ ಶ್ವಾಸ ನಾಳವನ್ನು ಶುದ್ಧೀಕರಿಸಿ ಸರಾಗ ಉಸಿರಾಟಕ್ಕೆ ಸಹಾಯ ಮಾಡುತ್ತದೆ.
ಅರೋಗ್ಯ ಮಿತಿಗಳು:
ಸ್ವ ಚಿಕಿತ್ಸೆ ಯಾವಾಗಲೂ ಅಪಾಯಕಾರಿ. ಕಪಾಲಭಾತಿ ಅಭ್ಯಾಸಕ್ಕೆ ಅರೋಗ್ಯ ಮಿತಿಗಳಿರುವುದರಿಂದ ರೋಗಿಗಳು ಈ ಅಭ್ಯಾಸವನ್ನು ವೈದ್ಯರು ಮತ್ತು ಯೋಗ ಚಿಕಿತ್ಸಾ ತಜ್ಞರ ಸಲಹೆಯಂತೆ ಅಭ್ಯಾಸ ಮಾಡತಕ್ಕದ್ದು. ಅಪಸ್ಮಾರ, ಅತಿ ರಕ್ತದೊತ್ತಡ, ಹರ್ನಿಯಾ, ಬೆನ್ನು ನೋವು ಹಾಗೂ ಶಸ್ತ್ರ ಚಿಕಿತ್ಸೆಯಾದ ರೋಗಿಗಳು ಅಭ್ಯಾಸ ಮಾಡಬಾರದು. ಸ್ತೀಯರು ತಮ್ಮ ಮುಟ್ಟಿನ ಸಂದರ್ಭದಲ್ಲಿ ಈ ಅಭ್ಯಾಸವನ್ನು ಮಾಡದಿರುವುದು ಒಳಿತು.