ಕೆ.ಆರ್. ನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಕಪ್ಪಡಿ ರಾಚಪ್ಪಾಜಿಯವರ ಕ್ಷೇತ್ರ.
ಈ ಕ್ಷೇತ್ರಕ್ಕೆ ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಉತ್ತರ ಕರ್ನಾಟಕದ ನಾನಾ ಭಾಗಗಳಿಂದಲೂ ಭಕ್ತರು ಬರುತ್ತಾರೆ.
ಕಪ್ಪಡಿ ಕ್ಷೇತ್ರವು ಜಾನಪದ ಕಾವ್ಯ ಹಾಗೂ ಧಾರ್ಮಿಕ ನಂಬಿಕೆಗಳ ಆಚರಣೆಯಿಂದ ದಕ್ಷಿಣ ಕರ್ನಾಟಕದಲ್ಲಿ ಪ್ರಭಾವಿ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.
ಘರ್ಷಣೆ, ಕಲಹ, ಒಡಕು, ಪರಸ್ಪರ ಭಿನ್ನಾಭಿಪ್ರಾಯ ಉಂಟಾದರೆ ಇಂದಿಗೂ ಯಾವುದೇ ಜಾತಿ, ಕುಲ ಸಮುದಾಯಗಳ ಭೇದವಿಲ್ಲದೆ ಕಪ್ಪಡಿಗೆ ಬಂದು ಸತ್ಯ ಮಾಡು ಎಂದು ಕರೆಯುವುದು ವಾಡಿಕೆ. ಯಾರು ಸಹ ಇಲ್ಲಿ ಅಸತ್ಯ ನುಡಿಯದಿರುವುದು ಸ್ಥಳದ ಮಹಿಮೆಗೆ ಸಾಕ್ಷಿಯಾಗಿದೆ.
ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಕಾವ್ಯದಲ್ಲಿ ಕಪ್ಪಡಿ ರಾಚಪ್ಪಾಜಿಯ ಮಹಿಮೆ ಪವಾಡಗಳ ಇತಿಹಾಸವಿರುವ ಇಲ್ಲಿ ಕೋರ್ಟು, ಕಚೇರಿ, ಪೊಲೀಸ್ ಠಾಣೆಗಳಲ್ಲಿ ಇತ್ಯರ್ಥವಾಗದ ಎಷ್ಟೋ ಪ್ರಕರಣಗಳು, ವ್ಯಾಜ್ಯಗಳು ಬಗೆಹರಿದಿವೆ.
ಕೆ.ಆರ್. ನಗರ ಪಟ್ಟಣದಿಂದ 8 ಕಿ.ಮೀ. ದೂರವಿರುವ ಕ್ಷೇತ್ರ ಕಾವೇರಿ ನದಿ ದಡದಲ್ಲಿದೆ. ಇಲ್ಲಿ ಯಾವುದೇ ಪೂಜಾಮೂರ್ತಿ, ವಿಗ್ರಹ ಇಲ್ಲ. ಇಲ್ಲಿರುವ ಉರಿಗಣ್ಣು ರಾಚಪ್ಪಾಜಿಯವರ ಗದ್ದುಗೆಯೇ ಸಮಸ್ತ ಪೂಜೆಯ ಕೇಂದ್ರ ಬಿಂದುವಾಗಿದೆ.
ಚನ್ನಾಜಮ್ಮ ಮತ್ತು ಸಿದ್ದಾಪ್ಪಾಜಿಯವರ ಗದ್ದುಗೆಗಳು ಭಕ್ತಿಭಾವದ ದ್ಯೋತಕಗಳಾಗಿದ್ದು ಪರಂಪರೆಯಂತೆ ಮಳವಳ್ಳಿ ಹಾಗೂ ಬೊಪ್ಪೆಗೌಡನಪುರ ಗುರು ಮನೆತನದವರು ಪೂಜಾ ಕಾರ್ಯಗಳನ್ನು ನಡೆಸುತ್ತಾರೆ. ಈ ಸಾರಿ ಮಳವಳ್ಳಿಯ ವರ್ಷ ಸಿದ್ದಲಿಂಗರಾಜೇ ಅರಸ್ ಅವರ ನೇತೃತ್ವತದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಧರೆಗೆ ದೊಡ್ಡವರೆಂದೆ ಹೆಸರುವಾಸಿಯಾಗಿರುವ ರಾಚಪ್ಪಾಜಿ, ಚನ್ನಾಜಮ್ಮ ತಮ್ಮ ಕಾಲದ ಆರ್ಥಿಕ, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದವರು. ಮೈಸೂರಿನ ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು ಮಾರ್ಗವಾಗಿ ದಟ್ಟ ಕಾಡಿನಿಂದ ಆವೃತವಾದ ಕಪ್ಪಡಿ ಕ್ಷೇತ್ರದಲ್ಲಿ ನೆಲೆ ನಿಂತರೆಂಬುದು ಇತಿಹಾಸ. ಕಾವೇರಿ ನದಿ ದಂಡೆಯ ಸುಂದರ ಪರಿಸರದಲ್ಲಿರುವ ಕಪ್ಪಡಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.
ಕಥೆ ಏನಿದೆ?: ಒಮ್ಮೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿಯವರು ತಮಗೆ ಶಿವಯೋಗ ಮಂದಿರ ನಿರ್ಮಾಣ ಮಾಡಿಕೊಡುವಂತೆ ಪ್ರೇರಣೆ ನೀಡಿದರು. ಅದರಂತೆ ಗುರುವಿನೆಡೆಗೆ ಜಲ ಭಾವಿಯನ್ನು ತೋಡಿ ನಂದಾದೀವಿಗೆ ಗೂಡನ್ನು ಕೊರೆದು ವರವೊಂದನ್ನು ಬೇಡುತ್ತಾನೆ. ಉಪ್ಪಲಗಶೆಟ್ಟಿಯು ಉರಿ ಗದ್ದುಗೆಯ ಮೇಲೆ ಇರುವ ರುಮಾಲು ಪಡೆಯಬೇಕೆಂದು ಆರತಿ ಇಡುತ್ತಾನೆ. ನಂತರ ಈ ನರರ ಹಂಗು ತಮಗಿನ್ನು ಬೇಡವೆಂದು ರಾಚಪ್ಪಾಜಿಯವರು ತಂಗಿ ಚನ್ನಾಜಮ್ಮನವರೊಡನೆ ಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದ್ದು ಅಂದಿನಿಂದ ಕಪ್ಪಡಿಯಲ್ಲಿ ಮೈಸೂರು ಅರಸರು ಮತ್ತು ಅವರ ಮನೆತನದವರಿಂದ ಪೂಜಾ ಕಾರ್ಯಗಳು ನಡೆದು ಬರುತ್ತಿವೆ.
ಶಿವರಾತ್ರಿಯಿಂದ ಯುಗಾದಿವರೆಗೆ ನಡೆಯುವ ಜಾತ್ರೆಯಲ್ಲಿ ಭಕ್ತಾಧಿಗಳು ದೇವಾಲಯದಿಂದ ಹೊರಗೆ ಪ್ರಾಣಿ ಬಲಿ ನೀಡಿ ಪೂಜೆ ಸಲ್ಲಿಸಿ ಹರಕೆ ತೀರಿಸುವುದು ಪದ್ಧತಿಯಾಗಿದೆ.
ಬಸ್ ವ್ಯವಸ್ಥೆ: ಕಪ್ಪಡಿ ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಕೆಎಸ್‌ಆರ್‌ಟಿಸಿ ಕೆ.ಆರ್. ನಗರ ಘಟಕದಿಂದ ನಿತ್ಯ 10 ಬಸ್‌ಗಳು ಸಂಚರಿಸಿಲಿದ್ದು, ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ನಿರಂತರವಾಗಿ ಭಕ್ತರ ಅನುಕೂಲಕ್ಕೆ ಲಭ್ಯವಾಗಲಿವೆ.