ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನಾಳೆ(ಶುಕ್ರವಾರ) ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ನೂರಾರು ಸಂಘಟನೆಗಳು ಬೆಂಬಲ ನೀಡಿವೆ.
ಆದರೆ ಬೆಂಗಳೂರಿನಲ್ಲಿಇಂದು(ಸೆ.28) ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಶುಕ್ರವಾರ ದಿನವಿಡೀ ಜಾರಿಯಲ್ಲಿರಲಿದೆ.
ಇನ್ನು ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರತಿಕ್ರಿಯೆ ನೀಡಿದ್ದು, ಶುಕ್ರವಾರ ಹಲವಾರು ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಾಳೆಯೂ ಸಹ ಪ್ರತಿಭಟನೆ ರ್ಯಾಲಿ ಮತ್ತು ಮೆರವಣಿಗೆಗೆ ಅವಕಾಶ ಇಲ್ಲ. ಇಂದು ರಾತ್ರಿ ಹನ್ನೆರಡು ಗಂಟೆಯಿಂದ ನಾಳೆ(ಸೆ.29) ರಾತ್ರಿ ಹನ್ನೆರಡು ಗಂಟೆ ವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ. ಹೀಗಾಗಿ ಮೆರವಣಿಗೆ ಮಾಡುವುದು ಸಾರ್ವಜನಿಕ ಸಭೆ ನಿಷೇಧವಿದೆ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಜೀವನಕ್ಕೆ ಸಮಸ್ಯೆ ಉಂಟು ಮಾಡುವಂತಿಲ್ಲ. ಬಂದ್ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಸಹ ಇದೆ. ಸಂಘಟನೆಗಳು ಮತ್ತು ರಾಜಕೀಯ ಪಾರ್ಟಿಗಳು ಬಂದ್ ಮಾಡುವಂತೆ ಇಲ್ಲ. ಬಂದ್ ಮಾಡಿದಾಗ ಯಾವುದೇ ನಷ್ಟ ಮತ್ತು ಆಸ್ತಿಗೆ ದಕ್ಕೆ ಉಂಟಾದರೆ ಬಂದ್ ಕರೆ ನೀಡಿದವರೇ ಹೊಣೆ. ಸಾರ್ವಜನಿಕರು ತಾವಾಗಿಯೇ ಬಂದ್ ಮಾಡಿದ್ರೆ ಸಮಸ್ಯೆ ಇಲ್ಲ. ಬದಲಾಗಿ ಬಲವಂತವಾಗಿ ಬಂದ್ ಮಾಡಿದ್ರೆ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ನಗರದ ಎಲ್ಲಾ ಪೊಲೀಸರು ಭದ್ರತೆಯಲ್ಲಿ ಇರುತ್ತಾರೆ. ಕೆಎಸ್ ಆರ್ ಪಿ, ಹೋಮ್ ಗಾರ್ಡ್ , ಆರ್ ಎಎಫ್ ಇರುತ್ತಾರೆ ಎಂದು ತಿಳಿಸಿದರು.