ಬೆಂಗಳೂರು(Bengaluru) ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ (ಪ್ರಭಾರ) ಪ್ರೊ. ಸಿ.ಟಿ. ಗುರುಪ್ರಸಾದ್ ಅವರ ಪತ್ನಿ ಎಚ್.ಕೆ. ಚೈತ್ರಾ (41) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜ್ಞಾನಭಾರತಿ ಬಳಿಯ ಕದಂಬ ಬಡಾವಣೆಯಲ್ಲಿ ನಡೆದಿದೆ.
ಈ ಸಂಬಂಧ ಸಹೋದರ ಡಾ. ಶರತ್ ಬಾಬು ಜ್ಞಾನಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಚೈತ್ರಾ, ಗುರುಪ್ರಸಾದ್, 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕದಂಬ ಬಡಾವಣೆಯಲ್ಲಿ ಕುಟುಂಬ ವಾಸವಿತ್ತು. ಕೆಲಸದ ನಿಮಿತ್ತ ಗುರುಪ್ರಸಾದ್ ಹಾವೇರಿಯಲ್ಲಿ ನೆಲೆಸಿದ್ದರು ಎಂದು ಹೇಳಿದರು.
ಮರಣಪತ್ರ ಪತ್ತೆ: ಚೈತ್ರಾ ಅವರು ಬರೆದಿದ್ದಾರೆ ಎನ್ನಲಾದ ಮರಣಪತ್ರ ಪತ್ತೆಯಾಗಿದೆ. ನನ್ನ ಆರೋಗ್ಯ ಸರಿ ಇಲ್ಲದಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಅದರಲ್ಲಿ ಬರೆಯಲಾಗಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಚೈತ್ರಾ ಅವರಿಗೆ ಎರಡು ತಿಂಗಳಿನಿಂದ ಆರೋಗ್ಯ ಸರಿ ಇರಲಿಲ್ಲ. ಮನೆಯಲ್ಲಿ ಒಬ್ಬರೇ ಇರುತ್ತಿದ್ದರೆಂದು ಸಹೋದರ ದೂರಿನಲ್ಲಿ ತಿಳಿಸಿದ್ದಾರೆ. ಇದು ಆತ್ಮಹತ್ಯೆಯಷ್ಟೇ ಎಂದಿರುವ ಸಹೋದರ, ಸಾವಿನಲ್ಲಿ ಯಾವುದೇ ಅನುಮಾನವಿಲ್ಲವೆಂದು ಸಹ ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿವೆ.














