ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಗೆ ಅಕ್ಟೋಬರ್ 3ರಿಂದ 10ರವರೆಗೆ ದಸರಾ ರಜೆ ಇರಲಿದೆ. ಆದರೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿಯಿಂದಲೇ ರಜೆ ಆರಂಭವಾಗಲಿದ್ದು, ಅಕ್ಟೋಬರ್ 11ರಂದು ಆಯುಧ ಪೂಜೆ ರಜೆ ಇರುವುದರಿಂದ ಹಾಗೂ ಆನಂತರ ಶನಿವಾರ, ಭಾನುವಾರ ಕಳೆದು ಅಕ್ಟೋಬರ್ 14ರಂದು ಮತ್ತೆ ನ್ಯಾಯಾಲಯದ ಕಲಾಪಗಳು ಅಧಿಕೃತವಾಗಿ ಆರಂಭವಾಗಲಿವೆ.
ಅದಾಗ್ಯೂ, ಅಕ್ಟೋಬರ್ 4 ಮತ್ತು 9ರಂದು ರಜಾಕಾಲೀನ ಪೀಠಗಳು ಕರ್ತವ್ಯ ನಿರ್ವಹಿಸಲಿವೆ. ಬೆಂಗಳೂರು ಪೀಠದಲ್ಲಿ ಅಕ್ಟೋಬರ್ 4ರಂದು ರಜಾಕಾಲೀನ ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್ ಆರ್ ಕೃಷ್ಣ ಕುಮಾರ್ ಮತ್ತು ಎಂ ಜಿ ಉಮಾ; ಏಕಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ವಿ ಶ್ರೀಶಾನಂದ ಮತ್ತು ಸಿ ಎಂ ಪೂಣಚ್ಚ ಅವರು ವಿಚಾರಣೆ ನಡೆಸಲಿದ್ದಾರೆ.
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಂ ನಾಗಪ್ರಸನ್ನ ಮತ್ತು ಕೆ ಎಸ್ ಹೇಮಲೇಖಾ ಅವರು ವಿಭಾಗೀಯ ಪೀಠದ ಪ್ರಕರಣಗಳು ಮುಗಿದ ಬಳಿಕ ಪ್ರತ್ಯೇಕವಾಗಿ ಕುಳಿತು ಏಕಸದಸ್ಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ.
ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್ ವಿಶ್ವಜಿತ್ ಶೆಟ್ಟಿ ಮತ್ತು ರಾಜೇಶ್ ರೈ ಕೆ ಅವರು ವಿಭಾಗೀಯ ಪೀಠದ ಪ್ರಕರಣಗಳು ಪೂರ್ಣಗೊಂಡ ಬಳಿಕ ಏಕಸದಸ್ಯ ಪೀಠದ ಪ್ರಕರಣಗಳನ್ನು ಪ್ರತ್ಯೇಕವಾಗಿ ಕುಳಿತು ವಿಚಾರಣೆ ನಡೆಸಲಿದ್ದಾರೆ.
ಅಕ್ಟೋಬರ್ 9ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಎಸ್ ರಾಚಯ್ಯ ಅವರು ವಿಭಾಗೀಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ ಬಸವರಾಜ ಅವರು ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ.
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಇ ಎಸ್ ಇಂದಿರೇಶ್ ಮತ್ತು ಸಿ ಎಂ ಜೋಶಿ ಅವರು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಿಲಿದ್ದು, ಬಳಿಕ ಪ್ರತ್ಯೇಕವಾಗಿ ಕುಳಿತು ಏಕಸದಸ್ಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಂ ಜಿ ಎಸ್ ಕಮಲ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ಪ್ರಕರಣಗಳ ವಿಚಾರಣೆ ನಡೆಸಲಿದ್ದು ಆನಂತರ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ.
ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾತ್ರ ರಜಾಕಾಲೀನ ಪೀಠಗಳು ವಿಚಾರಣೆ ನಡೆಸಲಿವೆ ಎಂದು ನ್ಯಾಯಾಂಗ ರಿಜಿಸ್ಟ್ರಾರ್ ಇ ರಾಜೀವ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.