ಬೆಳಗಾವಿ : ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯಬೇಕಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿಲ್ಲ ಎಂದು ತಿಳಿದುಬಂದಿದೆ.
ನ್ಯಾಯಮೂರ್ತಿ ಸಂಜಯಕುಮಾರ್, ಅಲೋಕ ಆರಾಧ್ಯೆ ನೇತೃತ್ವದ ದ್ವಿಸದಸ್ಯ ಪೀಠದ ಎದುರು ಈ ಅರ್ಜಿಯ ವಿಚಾರಣೆ ನಡೆಸಲು ಕಳೆದ ವರ್ಷದ ಅಕ್ಟೊಬರ್‌ನಲ್ಲಿ ನಿಗದಿಯಾಗಿತ್ತು. ಆದರೆ ಇಬ್ಬರೂ ನ್ಯಾಯಮೂರ್ತಿಗಳು ಬೇರೆ ಬೇರೆ ಪೀಠಗಳಲ್ಲಿ ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಲು ನಿಯುಕ್ತಿಗೊಂಡ ಹಿನ್ನೆಲೆಯಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿಲ್ಲ ಎನ್ನಲಾಗಿದೆ.
ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿರುವ 865 ನಗರ, ಪಟ್ಟಣ ಹಾಗೂ ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನ ವಿಚಾರಣೆಗೆ ಅಂಗೀಕರಿಸಬೇಕೋ ಅಥವಾ ತಿರಸ್ಕರಿಸಬೇಕೋ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬೇಕಿದೆ.















