ನವದೆಹಲಿ(Newdelhi): ಅಕ್ಟೋಬರ್ 18 ರಂದು ನಡೆಯಲಿರುವ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಸ್ಥಾನಕ್ಕೆ 1983ರ ವಿಶ್ವಕಪ್ ಹೀರೊ, ಕರ್ನಾಟಕ ಮೂಲದ ರೋಜರ್ ಬಿನ್ನಿ ಆಯ್ಕೆಯಾಗುವ ಸಾಧ್ಯತೆ ಇದೆ.
ಕಳೆದ ಒಂದು ವಾರದಿಂದ ನಡೆದ ನಿರಂತರ ಸಭೆಗಳಲ್ಲಿ ಚರ್ಚೆ ನಡೆಸಿದ ಬಳಿಕ ಬೆಂಗಳೂರಿನ 67 ವರ್ಷದ ರೋಜರ್ ಬಿನ್ನಿ ಅವರನ್ನು ಬಿಸಿಸಿಐನ 36ನೇ ಅಧ್ಯಕ್ಷರಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬೆಳವಣಿಗೆ ಬಗ್ಗೆ ಅರಿವಿರುವ ಮೂಲವೊಂದು ತಿಳಿಸಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಗ ಜಯ್ ಶಾ ಅವರು, ಬಿಸಿಸಿಐ ಕಾರ್ಯದರ್ಶಿಯಾಗಿ ಸತತ ಎರಡನೇ ಅವಧಿಗೆ ಮುಂದುವರಿಯಲಿದ್ದಾರೆ.
ಐಸಿಸಿಯ ಎಲ್ಲ ಶಕ್ತಿಶಾಲಿಮಂಡಳಿಗಳಿಗೆ ಭಾರತದ ಪ್ರತಿನಿಧಿಯಾಗಿ ಗಂಗೂಲಿ ಬದಲಿಗೆ ಶಾ ಅವರನ್ನು ನಿಯೋಜಿಸುವ ನಿರೀಕ್ಷೆ ಇದೆ.‘ಬಿಸಿಸಿಐ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಕೇಂದ್ರದ ಪ್ರಭಾವಿ ಸಚಿವರೊಬ್ಬರು ಪ್ರಮುಖ ಪಾತ್ರ ವಹಿಸಿದ್ದಾರೆ’ಎಂದು ಮೂಲಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ.
ಬಿಸಿಸಿಐ ಎಜಿಎಂನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ(ಕೆಸ್‌ಸಿಎ) ಪ್ರತಿನಿಧಿಯಾಗಿ ಸಂತೋಷ್ ಮೆನನ್ ಅವರ ಬದಲಿಗೆ ರೋಜರ್ ಬಿನ್ನಿ ಹೆಸರು ಕೇಳಿಬಂದ ಸಂದರ್ಭದಲ್ಲೇ ಈ ಬಗ್ಗೆ ಸುಳಿವು ಸಿಕ್ಕಿತ್ತು.
ರೋಜರ್ ಬಿನ್ನಿ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ, ಅವರು ವಿಶ್ವಕಪ್ ಹೀರೊ ಮತ್ತು ಶುದ್ಧ ಚಾರಿತ್ರ್ಯ ಹೊಂದಿದ್ದಾರೆ. ಭಾರತ ತಂಡದ ಆಯ್ಕೆ ಸ್ಪರ್ಧೆಯಲ್ಲಿ ಅವರ ಮಗ ಕಾಣಿಸಿಕೊಂಡಾಗ ಆಯ್ಕೆ ಸಮಿತಿಗೆ ರಾಜೀನಾಮೆ ನೀಡಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.














