ಮನೆ ರಾಜ್ಯ ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುತ್ತಾರೆ: ಎಸ್.ಟಿ.ಸೋಮಶೇಖರ್

ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುತ್ತಾರೆ: ಎಸ್.ಟಿ.ಸೋಮಶೇಖರ್

0

ಮೈಸೂರು(Mysuru): ದಸರಾ ಆದ ಮೇಲೆ, ದಸರಾ ನಡೆಯುವಾಗ ಇಂತಹ ಮದ್ದು ಹಾಕುವ ಕೆಲಸ ಜೊತೆಯಲ್ಲಿ ಇದ್ದವರಿಂದಲೇ ನಡೆದಿದೆ. ಅದು ನನಗೆ ಗೊತ್ತಿದೆ. ಎಲ್ಲವನ್ನೂ ಮೀರಿ ದಸರಾ ಯಶಸ್ವಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ತಿಳಿಸಿದರು.

‘ದಸರಾದಲ್ಲಿ ಅಧ್ವಾನಗಳು ನಡೆದವು’ ಎಂಬ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್‌ ಹೇಳಿಕೆಗೆ ಸಚಿವ ಎಸ್.ಟಿ.ಸೋಮಶೇಖರ್‌ ಮೇಲಿನಂತೆ ತಿರುಗೇಟು ನೀಡಿದ್ದು, ‘ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುವ ಕೆಲಸ ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಕೆಲವರು ರಾಜಕೀಯವಾಗಿ ಏನನ್ನೂ ಮಾಡಲು ಆಗದಿದ್ದಾಗ ಪಕ್ಕದಲ್ಲೇ ಕುಳಿತು ಮದ್ದು ಹಾಕಿ ಬಿಡುತ್ತಾರೆ‌. ಅಂಥವರಿಗೆ ಚಾಮುಂಡಿ ತಾಯಿ ಒಳ್ಳೆಯ ಬುದ್ಧಿ ಕೊಡಲಿ. ಅವರನ್ನೆಲ್ಲಾ ಎದುರಿಸುವ ಶಕ್ತಿಯನ್ನು ನನಗೆ ಕೊಡಲಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲರೂ ದಸರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 10 ದಿನವೂ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಮೈಸೂರಿನವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೂ ಈ ರೀತಿ ಎಲ್ಲಾ ಕಾರ್ಯಕ್ರಮಗಳಿಗೆ ‌ಹೋಗಿರಲಿಲ್ಲ. ನಾನು‌ ಪ್ರಮಾಣಿಕವಾಗಿ, ಉತ್ಸವವು ಅಚ್ಚುಕಟ್ಟಾಗಿ ನಡೆಯುವಂತಾಗಲು ಶ್ರಮಿಸಿದ್ದೇನೆ. ಲೆಕ್ಕವನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂದು ತಿಳಿಸಿದರು.

ಈ ಬಾರಿಯ ದಸರಾದ ಒಟ್ಟಾರೆ ಪ್ರಗತಿ ಮತ್ತು ಆಗಿರುವ ಲೋಪಗಳ ಬಗ್ಗೆ ಪುಸ್ತಕ ತರಲು ಪ್ರಯತ್ನಿಸುತ್ತೇನೆ ಎಂದರು.

ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ ಸಿಂಹ, ಇದು ಲಕ್ಷಾಂತರ ಜನರು ಬಂದು ಹೋದ ಕಾರ್ಯಕ್ರಮ. ಒಂದೆರೆಡು ತಪ್ಪುಗಳು ಸಹಜ. ಮೊಸರಲ್ಲಿ ಕಲ್ಲು ಹುಡುಕುವವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ನುಡಿದರು.