ಮನೆ ರಾಜ್ಯ ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಇಂದು ಸುಪ್ರೀಂ ಆದೇಶ

ಕರೂರು ಕಾಲ್ತುಳಿತ ದುರಂತ – ಸಿಬಿಐ ತನಿಖೆಗೆ ಇಂದು ಸುಪ್ರೀಂ ಆದೇಶ

0

ನವದೆಹಲಿ : ಸೆ. 27 ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸಿ ಸುಪ್ರೀಂ ಕೊರ್ಟ್‌ ಇಂದು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎನ್.ವಿ ಅಂಜಾರಿಯಾ ಅವರಿದ್ದ ದ್ವಿ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್‌ ನೇತೃತ್ವದಲ್ಲಿ ನಡೆದ ರಾಜಕೀಯ ರ‍್ಯಾಲಿವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್‌ ರಚಿಸಿದೆ.

ಇದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಘಟನೆ ಎಂದಿರುವ ಕೋರ್ಟ್‌, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ನ ಆದೇಶದಿಂದ ಸಿಎಂ ಎಂ.ಕೆ ಸ್ಟಾಲಿನ್‌ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ನಟ ದಳಪತಿ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದಿಂದ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಅರ್ಜಿಗಳು ಮದ್ರಾಸ್ ಹೈಕೋರ್ಟ್‌ನ ಏಕ ನ್ಯಾಯಾಧೀಶರು ನೀಡಿದ್ದ ವಿಶೇಷ ತನಿಖಾ ದಳ ತನಿಖೆಯ ಆದೇಶವನ್ನು ಪ್ರಶ್ನಿಸಿದ್ದವು. ಅಲ್ಲದೇ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ವಿಭಾಗೀಯ ಪೀಠವು ಸಿಬಿಐ ತನಿಖೆಯನ್ನು ತಿರಸ್ಕರಿಸಿದ್ದ ಆದೇಶವನ್ನೂ ಪ್ರಶ್ನಿಸಲಾಗಿತ್ತು.

ವಾಸ್ತವಾಂಶ ಪರಿಶೀಲಿಸಿದಾಗ ಈ ವಿಷಯವು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸಿಬಿಐಗೆ ಹಸ್ತಾಂತರಿಸಲು ನಿರ್ದೇಶಿಸಿದ್ದೇವೆ. ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಪ್ರತಿಯೊಬ್ಬ ನಾಗರಿಕರ ಹಕ್ಕು ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕೋರ್ಟ್‌ ಹೇಳಿದೆ.

ಎಲ್ಲಾ ರೀತಿಯ ಗೊಂದಲಗಳನ್ನ ನಿವಾರಿಸಲು ನಾವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದೇವೆ. ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಅಲ್ಲದೇ ರಾಜ್ಯದ ಸ್ಥಳೀಯರಲ್ಲದ ಇಬ್ಬರು ಐಪಿಎಸ್ ಅಧಿಕಾರಿಗಳು ಸಮಿತಿಯ ಭಾಗವಾಗಿರಲಿದ್ದಾರೆ.

ನಿವೃತ್ತ ನ್ಯಾಯಾಧೀಶರ ನಿರ್ದೇಶನಗಳ ಪ್ರಕಾರ ಸಮಿತಿಯು ತನ್ನದೇ ಆದ ಕಾರ್ಯವಿಧಾನಗಳನ್ನ ರೂಪಿಸಬೇಕು. ಇದರೊಂದಿಗೆ ತನಿಖೆಯ ಮಾಸಿಕ ವರದಿಯನ್ನು ಸಿಬಿಐ ಸಮಿತಿ ಮುಂದಿಡಬೇಕು ಎಂದು ಸಹ ಕೋರ್ಟ್‌ ಹೇಳಿದೆ.