ಚೆನ್ನೈ : ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟ ಘಟನೆ ನಡೆದ ಬಳಿಕ ತಮಿಳಗ ವೆಟ್ರಿ ಕಳಗಂ ಮತ್ತೆ ರಾಜಕೀಯ ರ‍್ಯಾಲಿಗೆ ಅನುಮತಿ ಕೇಳಿದೆ. ಮುಂದಿನ ಡಿಸೆಂಬರ್ 4ರಂದು ಸೇಲಂ ಜಿಲ್ಲೆಯಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸಲು ನಟ ಕಮ್ ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಪೊಲೀಸರ ಅನುಮತಿ ಕೋರಿದೆ. ಟಿವಿಕೆ ಪಕ್ಷದ ಜಿಲ್ಲಾ ಸೇಲಂ ಜಿಲ್ಲಾ ಕಾರ್ಯದರ್ಶಿ ಸೇಲಂ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಬೋಸ್ ಮೈದಾನ, ಫೋರ್ಟ್ ಮೈದಾನ ಮತ್ತು ಸೀಲನಾಯಕೆನ್ಪಟ್ಟಿ ಪ್ರದೇಶಗಳ ಪೈಕಿ ಒಂದು ಸ್ಥಳದಲ್ಲಿ ರ‍್ಯಾಲಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪತ್ರದಲ್ಲಿ ಟಿವಿಕೆ ಮನವಿ ಮಾಡಿದೆ. ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.
ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು 7 ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು.
ಅಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಮಂದಿ ಜೀವ ಕಳೆದುಕೊಂಡಿದ್ದರು. ಈ ಪ್ರಕರಣ ತಮಿಳುನಾಡು ರಾಜಕೀಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಘಟನೆ ಬಳಿಕ ರಾಜ್ಯ ಸರ್ಕಾರ ಹೊರತುಪಡಿಸಿ, ಟಿವಿಕೆ ಪಕ್ಷದಿಂದ ಪ್ರತ್ಯೇಕವಾಗಿ ಪರಿಹಾರ ಘೋಸಿಸಲಾಗಿತ್ತು. ಅಲ್ಲದೇ ಇತ್ತೀಚೆಗೆ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಪ್ರಸ್ತುತ ದುರಂತವನ್ನ ಸಿಬಿಐ ತನಿಖೆ ನಡೆಸುತ್ತಿದೆ. ಈ ನಡುವೆ ಮತ್ತೊಂದು ರ‍್ಯಾಲಿಗೆ ಅನುಮತಿ ಕೋರಿದೆ.















