ಕಾರವಾರ: ಪತ್ನಿಯನ್ನು ಹತ್ಯೆ ಮಾಡಿ ಶವವನ್ನು ನೀರು ತುಂಬುವ ಬ್ಯಾರಲ್ ನಲ್ಲಿಟ್ಟು ಕಾಡಿಗೆ ಎಸೆದಿದ್ದ ಪತಿಯನ್ನು ಹಾಗೂ ಆತನಿಗೆ ಸಹಕರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರಗಾಂವನಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಹಳಿಯಾಳ-ದಾಂಡೇಲಿ ಪೊಲೀಸರು ಆರೋಪಿ ಹಾಗೂ ಶವ ವಿಲೇವಾರಿಗೆ ಸಹಕರಿಸಿದ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.
ಮೃತ ಮಹಿಳೆಯನ್ನು ಶಾಂತಕುಮಾರಿ ಎಂದು ಗುರುತಿಸಲಾಗಿದೆ. ಪತಿ ತುಕರಾಂ ಬಂಧಿತ ವ್ಯಕ್ತಿ. ಬಂಧಿತರಾಗಿರುವ ಇಬ್ಬರನ್ನು ರಿಜ್ವಾನ್ ಮತ್ತು ಸಮೀರ್ ಪಂತೋಜಿ ಎಂದು ಗುರುತಿಸಲಾಗಿದೆ.
ತನಗಿಂತ 10 ವರ್ಷ ಕಿರಿಯವನಾದ ತುಕಾರಾಂ ಎಂಬಾತನನ್ನು ಶಾಂತಕುಮಾರಿ ವಿವಾಹವಾಗಿದ್ದರು. ತನಗೆ ದ್ರೋಹ ಬಗೆದಿರುವುದಾಗಿ ಶಾಂತಕುಮಾರಿ ಆಗಾಗ್ಗೆ ಪತಿಯೊಂದಿಗೆ ಜಗಳ ಮಾಡುತ್ತಿದ್ದಳು. ಈ ಗಲಾಟೆ ವಿಕೋಪಕ್ಕೆ ತಿರುಗಿದಾಗ, ತುಕಾರಾಮ್, ಶಾಂತಕುಮಾರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಪತ್ನಿಯ ಶವವನ್ನು ನೀರು ತುಂಬುವ ಬ್ಯಾರಲ್’ನಲ್ಲಿ ಬಚ್ಚಿಟ್ಟಿದ್ದಾನೆ.
ಬಳಿಕ ಮನೆ ಖಾಲಿ ಮಾಡುವ ನೆಪದಲ್ಲಿ ಇಬ್ಬರ ಸಹಾಯದೊಂದಿಗೆ ಟಾಟಾ ಎಸ್ ಬಾಡಿಗೆ ಪಡೆದು ಶವ ತುಂಬಿದ ಬ್ಯಾರಲ್’ನ್ನು ವಾಹನದಲ್ಲಿರಿಸಿದ್ದಾನೆ. ಇದನ್ನು ಗಮನಿಸಿದ ಮನೆ ಮಾಲೀಕರು ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತುಕಾರಾಂ ಗೋವಾಗೆ ಹೋಗಬೇಕೆಂದು ಉತ್ತರಿಸಿದ್ದಾನೆ. ನಂತರ ಶವವನ್ನು ಕಾಡೊಂದರಲ್ಲಿ ಎಸೆದಿದ್ದಾನೆ. ಈ ನಡುವೆ ಮಾಹಿತಿ ತಿಳಿದಿದ್ದ ಪೊಲೀಸರು ಚೆಕ್ ಪೋಸ್ಟ್’ಗಳಲ್ಲಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.
ವಾಹನದ ಬಗ್ಗೆ ವಿವರಗಳು ನಮಗೆ ತಿಳಿದಿರಲಿಲ್ಲ. ಆದರೆ, ವಾಹನದಲ್ಲಿ ಮೂವರು ಇರುತ್ತಾರೆಂಬ ಮಾಹಿತಿ ಮಾತ್ರ ತಿಳಿದಿತ್ತು. ತೇರಗಾಂವ ಗ್ರಾಮದ ಬಳಿ ವಾಹನವೊಂದು ಕಂಡು ಬಂದಿತ್ತು. ಆದರೆ, ವಾಹನದಲ್ಲಿ ಏನೂ ಇರಲಿಲ್ಲ. ಈ ವೇಳೆ ವಾಹನವನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆರೋಪಿಗಳು ಹತ್ಯೆ ಕುರಿತು ಬಾಯ್ಬಿಟ್ಟಿದ್ದರು. ಬಳಿಕ ಶವ ಎಸೆದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.