ಕಾರವಾರ: ಇಲ್ಲಿನ ಬಾಲಕಿಯರ ಬಾಲಮಂದಿರದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೋರ್ವಳು ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಶ್ವೇತಾ ಫಣೀಕರ (16) ಸಾವಿಗೀಡಾದವಳು. ಈಕೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಗರದ ಕೋಡಿಬಾಗದವಳಾದ ಈಕೆಗೆ ಪಾಲಕರಿಲ್ಲದ ಕಾರಣದಿಂದ ಬಾಲಕಿಯರ ಬಾಲಮಂದಿರದಲ್ಲಿ ಆಸರೆ ಕಲ್ಪಿಸಲಾಗಿತ್ತು.
ಪೂರ್ವಸಿದ್ಧತೆ ಪರೀಕ್ಷೆ ನಡೆಯುತ್ತಿದ್ದು ಶಾಲೆಗೆ ಹೊರಡಲು ಸಿದ್ಧಗೊಳ್ಳುವುದಾಗಿ ಸಿಬ್ಬಂದಿಗೆ ತೆರಳಿದ ವಿದ್ಯಾರ್ಥಿನಿ ಕಟ್ಟಡ ಮೇಲಿನ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಮಂದಿರದ ಸಿಬ್ಬಂದಿ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬಾಲಮಂದಿರದ ಸಿಬ್ಬಂದಿ ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿಯಿತು. ಈ ಹಿಂದೆ ನಡೆಸಲಾದ ಪೂರ್ವಸಿದ್ಧತೆ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಳು. ಉಳಿದೆಲ್ಲ ವಿಷಯದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ಪರೀಕ್ಷೆಯಲ್ಲಿ ಉತ್ತಮ ಅಂಕ ಸಾಧನೆ ಮಾಡುವ ಕುರಿತು ಆಕೆಗೆ ಸಲಹೆ ನೀಡಲಾಗಿತ್ತು. ಆಕೆಯೂ ಆತ್ಮವಿಶ್ವಾಸದಲ್ಲಿದ್ದಳು ಎಂದು ಪ್ರೌಢಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಸಾವಿಗೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ ಎಂದು ನಗರ ಠಾಣೆ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.














