ಬೆಂಗಳೂರು : ಪ್ರಧಾನಿ ಕಚೇರಿ ಅಧಿಕಾರಿ ಎಂದು ಹೇಳಿಕೊಂಡು ಕಾಶ್ಮೀರದ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಹಣ ವಂಚಿಸಿದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿಜಯನಗರ ನಿವಾಸಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂದು ಗುರುತಿಸಲಾಗಿದೆ. ಈತ ಅಮಿತ್ ಶಾ ದತ್ತು ಪುತ್ರ ಎಂದು ಹೇಳಿಕೊಂಡು ರಾಜಕಾರಣಿಗಳಿಗೂ ಯಾಮಾರಿಸಿದ್ದ. ಅಲ್ಲದೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದ. ಈಗ ಈತ ಪೊಲೀಸರ ಅತಿಥಿಯಾಗಿದ್ದಾನೆ.
ಏನು ಕೆಲಸವೂ ಇಲ್ಲದ ಸುಜಯೇಂದ್ರ ಎಲ್ಲರ ಬಳಿಯೂ ಕೇಂದ್ರ ಸರ್ಕಾರ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅದೇ ರೀತಿ ಜಮ್ಮು ಕಾಶ್ಮೀರದ ವೈದ್ಯರೊಬ್ಬರ ಬಳಿ ದೇವನಹಳ್ಳಿಯ ಬಳಿಯಲ್ಲಿ ಆಯುರ್ವೇದ ಹಾಸ್ಪಿಟಲ್ ತೆರಲು ಅವಕಾಶ ಮಾಡಿಕೊಡ್ತೀನಿ ಅಂತ 2.7 ಕೋಟಿ ಹಣವನ್ನು ವಸೂಲಿ ಮಾಡಿದ್ದಾನೆ.
ಈಗ ಸುಜಯೇಂದ್ರ ಬಂಧನದ ಬಳಿಕ ಆತನ ಅಸಲಿಯತ್ತು ಅನಾವರಣ ಆಗಿದೆ. ಸುಜಯೇಂದ್ರ ಈಗಾಗಲೇ ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದ. ಅಲ್ಲದೇ 4 ಚೆಕ್ ಬೌನ್ಸ್ ಕೇಸ್ ಇದ್ದಾವೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ.














