ಮನೆ ಕಾನೂನು ವಲಸಿಗರಲ್ಲದವರ ಮದುವೆಯಾದ ಕಾಶ್ಮೀರಿ ಪಂಡಿತ ಮಹಿಳೆಯರು ವಲಸಿಗ ಸ್ಥಾನಮಾನ ಕಳೆದುಕೊಳ್ಳುವುದಿಲ್ಲ: ಕಾಶ್ಮೀರ ಹೈಕೋರ್ಟ್

ವಲಸಿಗರಲ್ಲದವರ ಮದುವೆಯಾದ ಕಾಶ್ಮೀರಿ ಪಂಡಿತ ಮಹಿಳೆಯರು ವಲಸಿಗ ಸ್ಥಾನಮಾನ ಕಳೆದುಕೊಳ್ಳುವುದಿಲ್ಲ: ಕಾಶ್ಮೀರ ಹೈಕೋರ್ಟ್

0

ಭದ್ರತಾ ಕಾರಣಗಳಿಗಾಗಿ 1989ರ ಬಳಿಕ ಕಾಶ್ಮೀರ ಕಣಿವೆಯಿಂದ ವಲಸೆ ಹೋದ ಕಾಶ್ಮೀರಿ ಪಂಡಿತ ಸಮುದಾಯದ ಮಹಿಳೆ ವಲಸಿಗರಲ್ಲದವರನ್ನು ವಿವಾಹವಾದ ಮಾತ್ರಕ್ಕೆ ತನ್ನ ‘ವಲಸಿಗ’ ಸ್ಥಾನಮಾನ ಕಳೆದುಕೊಳ್ಳುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಉಚ್ಚ ನ್ಯಾಯಾಲಯ ಈಚೆಗೆ ತೀರ್ಪು ನೀಡಿದೆ .

Join Our Whatsapp Group

ಕಣಿವೆ ರಾಜ್ಯದಲ್ಲಿ 1990 ರ ದಶಕದಲ್ಲಿ ಸಂಘರ್ಷದ ವಾತಾವರಣ ಹೆಚ್ಚಿದ ಪರಿಣಾಮ ಕಾಶ್ಮೀರಿ ಪಂಡಿತರು ಅಲ್ಲಿಂದ ವಲಸೆ ಹೋಗಿದ್ದರು.  2009ರಲ್ಲಿ ಕಾಶ್ಮೀರಕ್ಕೆ ಅವರನ್ನು ಮರಳಿ ಬರಮಾಡಿಕೊಂಡು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕಾಶ್ಮೀರ ಸರ್ಕಾರ ವಿಶೇಷ ಉದ್ಯೋಗಾವಕಾಶಗಳನ್ನು ಘೋಷಿಸಿತ್ತು.

ವಿಶೇಷ ಉದ್ಯೋಗ ಯೋಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರನೆ ನಡೆಸಿದ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು  ಮೊಹಮ್ಮದ್ ಯೂಸುಫ್ ವನಿ ಅವರಿದ್ದ ಪೀಠ ಕಾಶ್ಮೀರದ ವಲಸಿಗ ಮಹಿಳೆ ವಲಸಿಗರಲ್ಲದವರನ್ನು ಮದುವೆಯಾಗಿರುವ ಕಾರಣಕ್ಕಾಗಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆಯೇ ಎಂಬ ಸಾರ್ವಜನಿಕ ಪ್ರಾಮುಖ್ಯತೆಯ ಪ್ರಶ್ನೆಗೆ ಹಾಗಾಗುವುದಿಲ್ಲ ಎಂದು ನವೆಂಬರ್ 11ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

ಪ್ರಕರಣದ ಮಹಿಳೆ ತನ್ನದಲ್ಲದ ತಪ್ಪಿಗೆ ಕಾಶ್ಮೀರದ ತನ್ನ ಮೂಲ ವಾಸಸ್ಥಳವನ್ನು ತೊರೆಯಬೇಕಾಯಿತು. ಕಾಶ್ಮೀರ ಕಣಿವೆಯಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ವಲಸಿಗರಾದವರು ಅವಿವಾಹಿತರಾಗಿ ಉಳಿಯಬೇಕೆಂದು ನಿರೀಕ್ಷಿಸಲಾಗದು ಎಂದು ನ್ಯಾಯಾಲಯ ನುಡಿದಿದೆ.

ವಲಸೆಯ ಕಾರಣಕ್ಕಾಗಿಯೇ, ಪ್ರತಿಯೊಬ್ಬ ಕಾಶ್ಮೀರಿ ಮಹಿಳೆಗೂ ಕಾಶ್ಮೀರಿ ಸಂಗಾತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುವುದು ಸಮಂಜಸವಾಗಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಇಂತಹ ಸ್ಥಿತಿಯಲ್ಲಿ ಮಹಿಳೆ ತನ್ನ ಕುಟುಂಬ ರೂಪಿಸಿಕೊಳ್ಳುವ ನೈಸರ್ಗಿಕ ಪ್ರಚೋದನೆಯ ಕಾರಣಕ್ಕೆ ವಲಸಿಗರಲ್ಲದವರನ್ನು ಮದುವೆಯಾಗಬೇಕಾಗುವುದರಿಂದ ವಲಸಿಗ ಸ್ಥಾನಮಾನ ಕಳೆದುಕೊಳ್ಳುತ್ತಾಳೆ ಎನ್ನುವುದು ತೀವ್ರ ತಾರತಮ್ಯದಿಂದ ಕೂಡಿದ್ದು ನ್ಯಾಯಾದ ಪರಿಕಲ್ಪನೆಗೆ ವ್ಯತಿರಿಕ್ತವಾಗುತ್ತದೆ ಎಂದಿದೆ.

ಪುರುಷ ವಲಸಿಗನು ವಲಸಿಗರಲ್ಲದವರನ್ನು ಮದುವೆಯಾಗಿದ್ದರೂ ವಲಸಿಗನಾಗಿಯೇ ಮುಂದುವರಿಯುವುದರಿಂದ ಮಹಿಳೆಗೆ ಮಾತ್ರವೇ ತಾರತಮ್ಯ ಎಸಗಿದಂತಾಗುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ. 

ಅಂತೆಯೇ ಸರ್ಕಾರದ ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ವಿಪತ್ತು ನಿರ್ವಹಣಾ ಪರಿಹಾರ, ಪುನರ್ವಸತಿ ಮತ್ತು ಪುನರ್ನಿರ್ಮಾಣ ಇಲಾಖೆಯಲ್ಲಿ ಇಬ್ಬರು ಕಾಶ್ಮೀರಿ ಪಂಡಿತ ಮಹಿಳೆಯರನ್ನು ಕಾನೂನು ಸಹಾಯಕರನ್ನಾಗಿ ನೇಮಿಸಲು ನಿರ್ದೇಶಿಸಿದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶವನ್ನು ಎತ್ತಿಹಿಡಿದಿದೆ. ನಾಲ್ಕು ವಾರಗಳಲ್ಲಿ ಈ ಇಬ್ಬರು ಮಹಿಳೆಯರಿಗೆ ನೇಮಕಾತಿ ಆದೇಶ ನೀಡುವಂತೆ ಅಧಿಕಾರಿಗಳಿಗೆ ಅದು ಸೂಚಿಸಿದೆ.