ಮನೆ ಸುದ್ದಿ ಜಾಲ ಕಾವೇರಿ ಕಿಚ್ಚು:ಶನಿವಾರ ಮಂಡ್ಯ ಬಂದ್‌ಗೆ ರೈತ ಹಿತ ರಕ್ಷಣಾ ಸಮಿತಿ ಕರೆ

ಕಾವೇರಿ ಕಿಚ್ಚು:ಶನಿವಾರ ಮಂಡ್ಯ ಬಂದ್‌ಗೆ ರೈತ ಹಿತ ರಕ್ಷಣಾ ಸಮಿತಿ ಕರೆ

0

ಮಂಡ್ಯ:ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಶನಿವಾರ (ಸೆ.23)ಮಂಡ್ಯ ಬಂದ್‌ಗೆ ಕರೆ ನೀಡಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವರ್ತಕರು, ಸಂಘಟನೆಗಳ ಮುಖಂಡರೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಬಂದ್‌ ನಿರ್ಧಾರ ಕೈಗೊಂಡಿದೆ.

Join Our Whatsapp Group


ಸುಪ್ರಿಂಕೋರ್ಟ್ ತೀರ್ಪನ್ನು ಸಮಿತಿಯ ನೇತೃತ್ವದ ಸಭೆ ಒಕ್ಕೊರಲಿನಿಂದ ತೀವ್ರವಾಗಿ ಖಂಡಿಸಿದ್ದು, ಕರ್ನಾಟಕ ಸರ್ಕಾರ ಸರ್ವ ಪಕ್ಷದ ತೀರ್ಮಾನದಂತೆ ಕಾವೇರಿ ಜಲಾನಯನ ಪ್ರದೇಶದ ಜನ ಜಾನುವಾರುಗಳಿಗೆ ಅವಶ್ಯಕವಾಗಿರುವ ಕುಡಿಯುವ ನೀರಿಗೆ ಆದ್ಯತೆ ನೀಡಿ, ಹಾಲಿ ಬೆಳಗಳ ಸಂರಕ್ಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲಾಗಿದೆ. ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕಾನೂನಾತ್ಮಕ ಹೋರಾಟಕ್ಕೆ ತಕ್ಷಣವೇ ಮುಂದಾಗಬೇಕು. ಭಾರತದ ರಾಷ್ಟ್ರೀಯ ಜಲ ನೀತಿಯ ಘೋಷಣೆಯಂತೆ ಕುಡಿಯುವ ನೀರನ್ನು ರಕ್ಷಣೆ ಮಾಡಲು ಕರ್ನಾಟಕ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕೆಂದು ಸಮಿತಿ ಆಗ್ರಹಿಸಿದೆ.


ಸೆ.23ರ ಮಂಡ್ಯ ಬಂದ್ ಹಿನ್ನೆಲೆಯಲ್ಲಿ 22ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಚಳವಳಿಯ ವೇದಿಕೆಯಲ್ಲಿ ಜಿಲ್ಲೆಯ ಎಲ್ಲಾ ಸಂಘಟನೆಗಳು, ಎಲ್ಲಾ ಹಾಲಿ, ಮಾಜಿ ಶಾಸಕರು ಹಾಗೂ ಸಂಸತ್ ಸದಸ್ಯರು, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ್ತು ಮಂಡ್ಯ ನಗರದ ವ್ಯಾಪಾರ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿ ಸಂಘಟನೆಗಳ ಹಾಗೂ ನಾಗರೀಕ ಬಂಧುಗಳ ಸಭೆ ಕರೆದಿದ್ದು ಎಲ್ಲರೂ ಭಾಗವಹಿಸುವಂತೆ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮನವಿ ಮಾಡಿದ್ದಾರೆ.