ಮೈಸೂರು : ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಟಾನದ ಪ್ರಥಮ ಹಂತದಲ್ಲಿ ಕೂಲಿಕಾರರನ್ನು ಸಂಘಟಿಸಿ ಕೂಲಿ ಕೆಲಸಕ್ಕೆ ಕರೆತರುವ ಕಾಯಕ ಬಂಧುಗಳ ಪಾತ್ರ ಬಹುಮುಖ್ಯವಾದದ್ದು, ಇವರು ಸಮುದಾಯ ಹಾಗೂ ಗ್ರಾಮ ಪಂಚಾಯಿತಿಗೆ ಸಂಪರ್ಕ ಸೇತುವೆಯಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.
ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜ಼ೀರ್ ಸಾಬ್ ರಾಜ್ಯ ಗ್ರಾಮೀಣ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ ಮೈಸೂರು ಹಾಗೂ ಗ್ರಾಮ ಸ್ವರಾಜ್ ಅಭಿಯಾನ-ಕರ್ನಾಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಬನ್ನಿಮಂಟಪದಲ್ಲಿರುವ ಓಡಿಪಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಭಾಗ ಮಟ್ಟದ ಕಾಯಕ ಬಂಧುಗಳ ತರಬೇತುದಾರರ 10 ದಿನಗಳ ತರಬೇತಿಯ ಶನಿವಾರ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಠಿಸುವುದರ ಜೊತೆಗೆ, ಸಮುದಾಯ ಆಸ್ತಿಗಳನ್ನೂ ಸೃಜಿಸುವುದು ಸರ್ಕಾರದ ಬಹುದೊಡ್ಡ ಕಾರ್ಯಕ್ರಮವಾಗಿದೆ ಎಂದರು.
ಕೂಲಿಕಾರರನ್ನು ಪ್ರೋತ್ಸಾಹಿಸಿ ಸಂಘಟಿಸುವ ಕಾಯಕ ಬಂಧಿಗಳಿಗೆ ತರಬೇತಿ ನೀಡಲು ಮಾಸ್ಟರ್ ತರಬೇತುದಾರರಾಗಿ ತರಬೇತಿ ಪಡೆದುಕೊಂಡಿರುವುದು ಒಳ್ಳೆಯ ಸಂಗತಿ. ಸುದೀರ್ಘ 10 ದಿನಗಳ ತರಬೇತಿಯಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿರುವ ನೀವು ತಾಲ್ಲೂಕು ಹಂತದಲ್ಲಿ ಕಾಯಕ ಬಂಧುಗಳನ್ನು ಪರಿಣಾಮಕಾರಿಯಾಗಿ ತಯಾರು ಮಾಡುವಂತೆ ತಿಳಿಸಿದರು.
ಬಳಿಕ,ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ)
ಡಾ.ಎಂ.ಕೃಷ್ಣರಾಜು ಅವರು ಮಾತನಾಡಿ, ಒಂದು ಮಗು ಗರ್ಭದಲ್ಲಿ ಇರುವಾಗಿನಿಂದ ಸ್ಮಶಾನದ ವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿವೆ. 2005ರಲ್ಲಿ ಉದ್ಯೊಗ ಖಾತರಿ ಕಾಯ್ದೆ ಪ್ರಾರಂಭವಾದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಸಮರ್ಪಕ ರಸ್ತೆ, ಚರಂಡಿಗಳು ಇರಲಿಲ್ಲ ನಂತರದ ಮೂರ್ನಾಲ್ಕು ವರ್ಷಗಳಲ್ಲಿ ಯೋಜನೆ ಮೂಲಕ ಎಲ್ಲಾ ಗ್ರಾಮದಲ್ಲೂ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿದೆ ಎಂದರು.
ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿ ಉತ್ತಮ ಕೂಲಿ ನೀಡಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಕೂಲಿಕಾರರನ್ನು ಸಂಘಟಿಸಲು ಕಾಯಕಬಂಧುಗಳ ಅವಶ್ಯಕತೆ ಇದೆ. ಗ್ರಾಮೀಣ ಜನರ ಜೀವನಾಧಾರಕ್ಕೆ ನೆರವಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಪ್ರತಿಭೆ ಸಂಸ್ಥೆ ನಿರ್ದೇಶಕ ಜಿ.ಪ್ರಸನ್ನ ಮೂರ್ತಿ, ಮೈಸೂರು ಜನಜಾಗೃತಿ ಸಂಸ್ಥೆ ನಿರ್ದೇಶಕ ವಿ.ಎನ್.ಮೂರ್ತಿ, ಹೆಚ್.ಡಿ.ಕೋಟೆ ನಿಸರ್ಗ ಫೌಂಡೇಷನ್ ನಿರ್ದೇಶಕ ಪ್ರಭು, ಗುಂಡ್ಲಪೇಟೆ ಟಾಡ್ರೋ ಸಂಸ್ಥೆ ನಿರ್ದೇಶಕ ಡಾ.ಮೋಹನ್ ಕೋಟೆಕೆರೆ, ಮಂಡ್ಯ ವಿಕಾಶನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಸ್ನೇಹ ಸಂಸ್ಥೆ ನಿರ್ದೇಶಕಿ ಹೇಮಾ ಪರಿವರ್ತನ ಸಂಸ್ಥೆ ನಿರ್ದೇಶಕ ರಾಜೇಗೌಡ ಹಾಗೂ ಮಳವಳ್ಳಿ ಜನರಕ್ಷ ಸಂಸ್ಥೆ ನಿರ್ದೇಶಕ ಕೃಷ್ಣೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.














