ಮಂಡ್ಯ: ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ನಮ್ಮ ಸಂಪರ್ಕದಲ್ಲಿದ್ದು ಅತಿ ಶೀಘ್ರದಲ್ಲಿ ಕೆ.ಆರ್.ಪೇಟೆ ಭಾಗದ ಮುಖಂಡರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿರುವ ಸ್ಟಾರ್ ಚಂದ್ರು ಅವರ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ದಿನಾಂಕ ಇನ್ನೂ ನಿಗದಿಯಾಗಿಲ್ಲ.ಅವರು ಶೀಘ್ರವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದರು.
ಒಂದು ತಿಂಗಳಿನಿಂದ ನಾವು ಪ್ರಚಾರ ಮಾಡ್ತಾ ಇದೀನಿ.ಈಗಾಗಲೇ ಒಂದು ಸುತ್ತು ಗ್ಯಾರಂಟಿ ಸಮಾವೇಶದ ಮೂಲಕ ಪ್ರಚಾರ ಮಾಡಿದ್ದೇವೆ. ಎರಡನೇ ಹಂತದಲ್ಲಿ ಎಲ್ಲಾ ತಾಲೂಕಿನಲ್ಲಿ ಸಭೆ ಮಾಡಿದ್ದೇವೆ. ಯಾವ ಯಾವ ತಾಲೂಕಿನಲ್ಲಿ ಹೇಗೆ ಪ್ರಚಾರ ಮಾಡಬೇಕೆಂದು ಪ್ಲಾನ್ ಮಾಡಿದ್ದೇವೆ.ಮಂತ್ರಿಗಳು, ಶಾಸಕರು, ಸ್ಥಳೀಯ ನಾಯಕರು ಹೇಗೆ ಕೆಲಸ ಮಾಡಬೇಕೆಂದು ನಿಗದಿ ಮಾಡಿದ್ದೇವೆ.ಪ್ರತಿ ತಾಲೂಕುವಾರು ನಾವು ಸಭೆ ಮಾಡ್ತಾ ಇದ್ದೀವಿ. 29ರೊಳಗೆ ನಮ್ಮ ತಾಲೂಕುವಾರು ಸಭೆ ಮುಕ್ತಾಯವಾಗುತ್ತೆ. ಏ.1ರಂದು ಸ್ಟಾರ್ ಚಂದ್ರು ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಕೆ.ಆರ್.ಪೇಟೆ,ಕೆ.ಆರ್.ನಗರದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ. ಅಲ್ಲದೆ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ಬರುವ ಸಾಧ್ಯತೆ ಇದೆ ಎಂದರು.
ದೇವೇಗೌಡರ ಮಗ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ನಾಯಕ.ಎಚ್.ಡಿ.ಕುಮಾರಸ್ವಾಮಿ ಮಧುಗಿರಿಗೆ ಹೋದಾಗ ಇದು ನನ್ನ ಕರ್ಮ ಅಂತಾರೆ.ಅದೇ ರೀತಿ ರಾಮನಗರ, ಚನ್ನಪಟ್ಟಣವನ್ನು ಕರ್ಮಭೂಮಿ ಅಂತಾರೆ.ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಹೊರ ಜಿಲ್ಲೆಯವರಿಗೆ ಭಾವನಾತ್ಮಕವಾಗಿ ಅವಕಾಶ ನೀಡಿಲ್ಲ.ಕುಮಾರಸ್ವಾಮಿ ಅವರು ರಾಮನಗರವನ್ನ ಪೂರ್ತಿ ತಿರಸ್ಕಾರ ಮಾಡ್ತಾರೋ ಅಥವಾ ಅಲ್ಲಿಯೇ ಅರ್ಧ ಬಿಟ್ಟು ಇಲ್ಲಿಗೆ ಬರ್ತಾರೋ ಗೊತ್ತಿಲ್ಲ.ಇಲ್ಲಾ ಕೊನೆ ಗಳಿಗೆಯಲ್ಲಿ ಬೇರೆ ಯಾರನ್ನಾದರೂ ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದರು.
ಕುಮಾರಸ್ವಾಮಿ ಅವರನ್ನು 2 ಬಾರಿ ಮುಖ್ಯಮಂತ್ರಿ ಮಾಡಿದ ಜಿಲ್ಲೆ ರಾಮನಗರ.ಅಂತಹ ಜಿಲ್ಲೆಯನ್ನು ಪ್ರಾಣ ಹೋಗುವವರೆಗೆ ಬಿಟ್ಟು ಹೋಗಲ್ಲ ಅಂತಾ ಹೇಳ್ತಾ ಇದ್ರು. ಈಗ ಮಂಡ್ಯಗೆ ಹೋಗ್ತಾ ಇದಾರೆ ಎಂದು
ರಾಮನಗರ ಜಿಲ್ಲೆಯವರೇ ಹೇಳುತ್ತಾ ಯಾವ ಕಾರಣಕ್ಕೂ ಬೇಡ ಎನ್ನುತ್ತಿದ್ದಾರೆ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರು ನಮ್ಮ ಚುನಾವಣೆಯನ್ನು ನಾವು ಮಾಡ್ತೀವಿ. ಐದು ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ
ಕಾರ್ಯಗಳನ್ನು ನಾವು ಜನರ ಮುಂದಿಟ್ಟುಕೊಂಡು ಹೋಗುತ್ತೇವೆ.ಮಂಡ್ಯ ಜಿಲ್ಲೆಯ ಜನರು ಬಹಳ ಸೂಕ್ಷ್ಮ ಹಾಗೂ ಬುದ್ದಿವಂತರು. ಜಿಲ್ಲೆಯ ಜನ ತೀರ್ಮಾನ ಮಾಡುವಾಗ 10 ಸಲ ಯೋಚನೆ ಮಾಡುತ್ತಾರೆ.ನಮ್ಮ
ಅಭಿವೃದ್ಧಿ ನೋಡಿಕೊಂಡು ಜನರು ನಮಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಸುಮಲತಾ ಬೆಂಬಲ ಕೊಡ್ತೀನಿ ಅಂತ ಅಂದ್ರೆ ನಾವು ಬೇಡ ಅನ್ನೋದಿಲ್ಲ.ಸುಮಲತಾ ಅವರ ಜೊತೆ ರಾಜಕೀಯವಾಗಿ ನಾವು ಮಾತಾಡಿಲ್ಲ. ಅವರ ನಿಲುವುಗಳ ಬಗ್ಗೆ ನಾನು ಯಾವತ್ತೂ ಪ್ರಶ್ನೆ ಮಾಡಿಲ್ಲ. ಅವರು ಏನು ಬೇಕಾದ್ರು ನಿರ್ಧಾರ ತೆಗೆದುಕೊಳ್ಳಲಿ. ಅವರು ನಮಗೆ ಬೆಂಬಲ ಕೊಡ್ತೀನಿ ಅಂದ್ರೆ ಕೊಡಲಿ.ನಾವು ಸ್ವಾಗತಿಸುತ್ತೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ)ಅವರು ಮಾತನಾಡಿ,ಏಪ್ರಿಲ್ 1 ರಂದು ನಾಮಪತ್ರ ಸಲ್ಲಿಸುತ್ತೇನೆ.ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು,ಜಿಲ್ಲೆಯ ಮುಖಂಡರು ಹಾಗೂ ಪಕ್ಷಾತೀತವಾಗಿ ಜನರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಸ್ಟಾರ್ ಚಂದ್ರು,ಶಾಸಕ ಗಣಿಗ ರವಿಕುಮಾರ್,ಮುಖಂಡರಾದ ಎಂ. ಎಸ್.ಚಿದಂಬರ್ ಉಪಸ್ಥಿತರಿದ್ದರು.