ಮನೆ ರಾಷ್ಟ್ರೀಯ ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ: ಪ್ರತಿಧ್ವನಿಸಿದ ಹರಹರ ಮಹಾದೇವ್‌ ಘೋಷಣೆ

ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ: ಪ್ರತಿಧ್ವನಿಸಿದ ಹರಹರ ಮಹಾದೇವ್‌ ಘೋಷಣೆ

0

ಡೆಹರಡೂನ್​ (ಉತ್ತರಾಖಂಡ): ಚಳಿಗಾಲದ ಆರು ತಿಂಗಳು ಹಿಮದಿಂದ ಮುಚ್ಚಲಾಗಿದ್ದ ಕೇದಾರನಾಥ ದೇವಸ್ಥಾನ ಬಾಗಿಲು ಇಂದು ಬೆಳಗ್ಗೆ 6 ಗಂಟೆ 20ನಿಮಿಷಕ್ಕೆ ​ವೇದಘೋಷದೊಂದಿಗೆ ಭಕ್ತರ ದರ್ಶನಕ್ಕಾಗಿ ತೆರೆಯಲಾಯಿತು.

Join Our Whatsapp Group

ಈ ವೇಳೆ ಹರಹರ ಮಹಾದೇವ್‌ ಎಂಬ ಘೋಷಣೆ ಮತ್ತು ದೈವ ಕೀರ್ತನೆಗಳು ಕೇದಾರ್ ಧಾಮ್‌’ನಲ್ಲಿ ಪ್ರತಿಧ್ವನಿಸಿದವು.

ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಕೂಡ ಕೇದಾರ್ ಧಾಮದಲ್ಲಿ ಹಾಜರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಸಾಕ್ಷಿಯಾದರು.

ಕೇದಾರನಾಥ ದ್ವಾರಗಳನ್ನು ತೆರೆಯುವ ಸಂದರ್ಭದಲ್ಲಿ, ಮೊದಲ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ತಣ್ಣನೆಯ ವಾತಾವರಣದ ನಡುವೆ ಇಂದು ಬೆಳಗ್ಗೆಯಿಂದಲೇ ಕೇದಾರಧಾಮದ ಬಾಗಿಲು ತೆರೆಯುವ ಪ್ರಕ್ರಿಯೆ ಆರಂಭವಾಗಿತ್ತು. ಸಡಗರದ ನಡುವೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕೇದಾರನಾಥ್​ ಪಂಚಮುಖಿ ಭೋಗ್ ವಿಗ್ರಹ, ಚಾಲ್ ಉತ್ಸವ ವಿಗ್ರಹಗಳನ್ನ ಡೋಲಿಯಲ್ಲಿ ಇರಿಸಿ ರಾವಲ್ ನಿವಾಸದಿಂದ ದೇವಾಲಯದ ಆವರಣಕ್ಕೆ ತರಲಾಯಿತು.

ಈ ವೇಳೆ ದಾರಿ ಉದ್ದಕ್ಕೂ ಭಕ್ತರ ಹರಹರ ಮಹಾದೇವ್ ಎಂಬ ಘೋಷಣೆಗಳು ಮೊಳಗಿದವು. ಇದಾದ ಬಳಿಕ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ಬದರಿನಾಥ್​ ಕೇದಾರನಾಥ್​ ಮಂದಿರ ಸಮಿತಿ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಕೇದಾರನಾಥ ದೇವಸ್ಥಾನದ ಮಹಾದ್ವಾರ ತೆರೆಯಲಾಯಿತು.

ಈ ಶುಭ ಸಮಯದಲ್ಲಿ ಕೇದಾರನಾಥ ದೇವಸ್ಥಾನದ ಮುಂದೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಕೇದಾರನಾಥ ದ್ವಾರಗಳನ್ನು ತೆರೆದ ನಂತರ, ಭಕ್ತರು ಕೇದಾರೇಶ್ವರನ ದರ್ಶನ ಪಡೆದರು. ಕೇದಾರನಾಥ್ ದೇವಸ್ಥಾನದ ಮಹಾದ್ವಾರ ತೆರೆಯುವ ಮುನ್ನ 23 ಕ್ವಿಂಟಾಲ್ ವಿವಿಧ ಹೂವುಗಳಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು.

ಭಕ್ತರಿಗೆ ಆರೋಗ್ಯದ ಸಮಸ್ಯೆ ಎದುರಾದಲ್ಲಿ ತಕ್ಷಣ ಚಿಕಿತ್ಸೆಗಾಗಿ ವೈದ್ಯರ ತಂಡವನ್ನ ನಿಯೋಜನೆ ಮಾಡಲಾಗಿದೆ. ಹಾಗೆಯೇ ಯಾತ್ರೆಯ ಮಾರ್ಗಗಳಲ್ಲಿ 130 ವೈದ್ಯರನ್ನು ನಿಯೋಜಿಸಲಾಗಿದೆ. ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆಕ್ಸಿಜನ್ ಸಿಲಿಂಡರ್​ ಗಳು ಮತ್ತು ಔಷಧಗಳಿಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಈ ನಡುವೆ ಹಿಮಾಪಾತವಾಗುತ್ತಿರುವ ಹಿನ್ನೆಲೆ ಕೇದಾರನಾಥ ಯಾತ್ರೆಯ ಮುಂಗಡ ನೋಂದಣಿ ಸ್ಥಗಿತಗೊಳಿಸಲಾಗಿದೆ. ಇನ್ನು ಕೇದಾರನಾಥ ಯಾತ್ರೆಗೆ ಆಗಮಿಸುತ್ತಿರುವ ಪ್ರಯಾಣಿಕರನ್ನು ಮಾರ್ಗ ಮಧ್ಯದಲ್ಲೇ ತಡೆಹಿಡಿಯಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.