ಮನೆ ರಾಜಕೀಯ ಮಾನಸಿಕ ಅಸ್ವಸ್ಥ ಹರಿಪ್ರಸಾದರನ್ನು ಸಂಪುಟದಿಂದ ದೂರವಿಟ್ಟಿರುವುದು ಒಳ್ಳೆ ಕೆಲಸ: ಬಿಜೆಪಿ

ಮಾನಸಿಕ ಅಸ್ವಸ್ಥ ಹರಿಪ್ರಸಾದರನ್ನು ಸಂಪುಟದಿಂದ ದೂರವಿಟ್ಟಿರುವುದು ಒಳ್ಳೆ ಕೆಲಸ: ಬಿಜೆಪಿ

0

ಬೆಂಗಳೂರು: ರಾಜ್ಯದಲ್ಲಿ‌ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಜ್ಞಾನಿಗಳು‌, ಮತಿಗೇಡಿಗಳು ಬಾಲ ಬಿಚ್ಚುತ್ತಿದ್ದಾರೆ. ಅಂದ ಹಾಗೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಇದುವರೆಗೂ ಮಾಡಿದ ಒಂದೇ ಒಂದು ಒಳ್ಳೆ ಕೆಲಸ ಅಂದರೆ, ಮಾನಸಿಕ ಅಸ್ವಸ್ಥರಾಗಿರುವ ಬಿ.ಕೆ. ಹರಿಪ್ರಸಾದ್ ಅವರಂತಹವರನ್ನು ಸಚಿವ ಸಂಪುಟದಿಂದ ದೂರವಿಟ್ಟಿರುವುದು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

Join Our Whatsapp Group

ಆರ್‌ ಎಸ್‌ ಎಸ್‌ ಸಂಸ್ಥಾಪಕರಲ್ಲೊಬ್ಬರಾದ ಕೇಶವ ಬಲಿರಾಮ್ ಹೆಡಗೇವಾರ್‌ ತರಹದ ಹೇಡಿಗಳ ಪಾಠಗಳನ್ನು ಶಾಲೆಗಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂಬ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.

ಗೌರವಾನ್ವಿತ ಹೆಡಗೇವಾರರಂತ ಅಪ್ರತಿಮ ದೇಶಭಕ್ತರ ಹೆಸರು ಹೇಳುವ ಯೋಗ್ಯತೆಯನ್ನು ಹರಿಪ್ರಸಾದರವರು ಮೊದಲು ಸಂಪಾದಿಸಲಿ, ಉಳಿದದ್ದೆಲ್ಲ ಮತ್ತೆ! ಎಂದು ಟೀಕಿಸಿದೆ.

ಗುರುವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ಹರಿಪ್ರಸಾದ್ ಅವರು, ಶಿಕ್ಷಣ ಸೇರಿದಂತೆ ಸರ್ಕಾರದ ಯಾವ ಇಲಾಖೆಯಲ್ಲೂ ಸಂಘ ಪರಿವಾರದ ಸಿದ್ಧಾಂತಗಳು ನುಸುಳಲು ಅವಕಾಶ ನೀಡುವುದಿಲ್ಲ. ಹೆಡಗೇವಾರ್‌ ತರಹದ ರಣಹೇಡಿಗಳ ವಿಚಾರ ಇನ್ನು ಮುಂದೆ ಪಠ್ಯದಲ್ಲಿ ಇರುವುದಿಲ್ಲ ಎಂದಿದ್ದರು.

ಹೆಡಗೇವಾರ್‌ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಬಿಜೆಪಿಯವರು ಸಾಬೀತು ಮಾಡಲಿ. ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ. ಅವರೆಲ್ಲ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ನೀಡಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.

ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯ ತಂದಿದ್ದಾರೆ. ಅ ಹೋರಾಟ ಮಾಡಿದವರಿಗೆ ಅಪಮಾನ ಮಾಡುತ್ತಿದ್ದಾರೆ. ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣೆ ಪತ್ರ ಯಾಕೆ ಕೊಟ್ಟರು ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಎಂದು ಮೊದಲು ಹೇಳಲಿ. ಅವರ ಚಿತ್ರಗುಪ್ತ ಪುಸ್ತಕದಲ್ಲೇ ಬ್ರಿಟಿಷರಿಗೆ ಯಾಕೆ ನಾನು ಕ್ಷಮಾಪಣೆ ಕೇಳಿದ್ದೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಇಂತಹ ರಣಹೇಡಿಗಳ ಬಗ್ಗೆ ನಮ್ಮ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದರು.

ಹಿಂದಿನ ಲೇಖನಹನುಮಂತನಗರ ಕುಮಾರಸ್ವಾಮಿ ದೇವಾಲಯ
ಮುಂದಿನ ಲೇಖನಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವೇಗವಾಗಿ ಬೆಳವಣಿಗೆ