ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋದ 2023 ರ ಪ್ರಿಕ್ಸ್ ವರ್ಸೇಲ್ಸ್‌ನ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನವಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಗುರುತಿಸಲ್ಪಟ್ಟಿದೆ. ಇದಕ್ಕಾಗಿ ಒಳಾಂಗಣ ವಿನ್ಯಾಸ -2023ರ ವಿಶ್ವ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಲೀ ಸಾಬ್ ಅವರ ಅಧ್ಯಕ್ಷತೆಯ ಪ್ರಿಕ್ಸ್ ವರ್ಸೈಲ್ಸ್ 2023ರ ವರ್ಲ್ಡ್ ಜಡ್ಜಲ್ ಪ್ಯಾನೆಲ್ ಪ್ರಶಸ್ತಿಯನ್ನು ಗೆಲ್ಲಲು ಟಿ2 ಅರ್ಹತೆ ಪಡೆದಿದೆ.
ಇದು ಯುನೆಸ್ಕೋದಿಂದ ಅಂಗೀಕರಿಸಲ್ಪಟ್ಟ ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ವಿನ್ಯಾಸ ಮತ್ತು ವಾಸ್ತುಶಿಲ್ಪ ಪ್ರಶಸ್ತಿಯಾಗಿದೆ. ಈ ಗೌರವಾನ್ವಿತ ಮನ್ನಣೆ ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣ ಬೆಂಗಳೂರು.
ಜಾಗತಿಕ ಮಟ್ಟದಲ್ಲಿ ಅಸಾಧಾರಣ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ಹೊಂದಿರುವ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು ವಿಮಾನ ನಿಲ್ದಾಣ ಒಂದಾಗಿದೆ ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ಜಾಗತಿಕವಾಗಿ ಉನ್ನತ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿದೆ.
2015ರಲ್ಲಿ ಸ್ಥಾಪಿಸಲಾದ ಪ್ರಿಕ್ಸ್ ವರ್ಸೈಲ್ಸ್, ಸಾಂಸ್ಕೃತಿಕ ರಾಯಭಾರಿಯಾಗಿದ್ದು ನಾವೀನ್ಯತೆ, ಸೃಜನಶೀಲತೆ, ಸ್ಥಳೀಯ ಪರಂಪರೆ, ಪರಿಸರ ದಕ್ಷತೆ ಮತ್ತು ಸಾಮಾಜಿಕ ಸಂವಹನದ ಮೌಲ್ಯಗಳನ್ನು ಗುರುತಿಸಿ ಗೌರವಿಸುತ್ತದೆ.
ಪ್ರಶಸ್ತಿ ಘೋಷಿಸಿರುವ ಪ್ರಿಕ್ಸ್ ವರ್ಸೈಲ್ಸ್, ಈ ವಿಮಾನ ನಿಲ್ದಾಣದ ಅದ್ಭುತ ವಿನ್ಯಾಸ ಮತ್ತು ವಾಸ್ತುಶಿಲ್ಪ ಜಾಗತಿಕ ಮಟ್ಟದಲ್ಲಿದೆ ಎಂದು ತಿಳಿಸಿದೆ.
ಜಾಗತಿಕ ಪ್ರಮುಖ ಏರ್ಪೋರ್ಟ್ಗಳ ಸಾಲಿನಲ್ಲಿ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದ ಸ್ಥಾನ ಕುರಿತು ಮಾತನಾಡಿರುವ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಡೆಟ್ನ ಎಂಡಿ ಮತ್ತು ಸಿಒಒ ಹರಿ ಮಾರರ್, ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಟರ್ಮಿನಲ್ 2 ನಾಮನಿರ್ದೇಶನವಾಗಿದ್ದು ಹೆಮ್ಮೆಯ ಸಂಗತಿ ಎಂದರು.
ಟರ್ಮಿನಲ್ 2 ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನ ಐಜಿಬಿಸಿ ಪ್ಲಾಟಿನಂ ಪ್ರಶಸ್ತಿಯನ್ನೂ ಪಡೆದಿದೆ. ಟಿ2 ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಇದು ವಿಶ್ವದ ಅತಿ ದೊಡ್ಡ ಟರ್ಮಿನಲ್‌ಗಳಲ್ಲಿ ಒಂದು. ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಟರ್ಮಿನಲ್ ಬಿಂಬಿಸುತ್ತದೆ. ಕೃತಕ ಜಲಪಾತ, ಆಕರ್ಷಕ ಗಿಡಗಳು, ಆಧುನಿಕ ತಂತ್ರಜ್ಞಾನ, ಹ್ಯಾಂಗಿಂಗ್ ಗಾರ್ಡನ್ ಅನ್ನು ಇದು ಹೊಂದಿದೆ. ಟರ್ಮಿನಲ್ 2ದಿಂದ ಅಂತರರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತವೆ.