ತಿರುವನಂತರಪುರ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಚಾನೆಲ್‌ಗಳಿಗೆ ನಿರ್ಬಂಧ ವಿಧಿಸಿದ ಘಟನೆ ಸೋಮವಾರ ನಡೆದಿದೆ.
ಸಿಪಿಎಂ ನಡೆಸುತ್ತಿರುವ ‘ಕೈರಳಿ’ ಮತ್ತು ಕೇರಳದ ‘ಜಮಾತ್–ಎ– ಇಸ್ಲಾಮಿ’ ಸಂಘಟನೆ ಬೆಂಬಲಿತ ‘ಮೀಡಿಯಾ ಒನ್’ನ ಸುದ್ದಿ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾ ಸಿಬ್ಬಂದಿಯನ್ನು ಸುದ್ದಿಗೋಷ್ಠಿಯಿಂದ ಹೊರ ನಡೆಯುವಂತೆ ರಾಜ್ಯಪಾಲರು ಸೂಚನೆ ನೀಡಿದ್ದು, ಈ ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿವೆ ಎಂದು ಅವರು ದೂರಿದರು.
ಶಾ ಬಾನು ಪ್ರಕರಣದಲ್ಲಿ ‘ಮೀಡಿಯಾ ಒನ್’ ವಾಹಿನಿಯು ತಮ್ಮ ವಿರುದ್ಧ ಪ್ರಚಾರ ಮಾಡುತ್ತಿದೆ ಎಂದು ರಾಜ್ಯಪಾಲರು ಆರೋಪಿಸಿದರು.
ರಾಜ್ಯಪಾಲರ ಕಚೇರಿಯ ಅನುಮತಿಯ ಮೇರೆಗೆ ಸುದ್ದಿಗೋಷ್ಠಿಗೆ ಬಂದಿರುವುದಾಗಿ ಈ ವಾಹಿನಿಗಳ ಪ್ರತಿನಿಧಿಗಳು ತಿಳಿಸಿದರೂ, ರಾಜ್ಯಪಾಲರು ತಮ್ಮ ನಿಲುವು ಬದಲಿಸಲಿಲ್ಲ.
ರಾಜ್ಯಪಾಲರ ಈ ನಡೆಯನ್ನು ಖಂಡಿಸಿರುವ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಪಾಲರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ. ಈ ಸಂಬಂಧ ಸಂಘವು ಮಂಗಳವಾರ ರಾಜಭವನದವರೆಗೆ ಮೆರವಣಿಗೆ ಹಮ್ಮಿಕೊಂಡಿದೆ.