ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾನೂನು ಸಲಹೆಗಾರ, ಹಿರಿಯ ವಕೀಲ ಹಾಗೂ ವಿಪ್ರ ಸಮಾಜದ ಅಧ್ಯಕ್ಷ ಕೆ.ಎಸ್. ದೇಶಪಾಂಡೆ (72) ಅವರು ಮಂಗಳವಾರ ಸಂಜೆ ಬೆಳಗಾವಿ ಜಿಲ್ಲೆಯ ಖಾನಾಪುರ ಹತ್ತಿರದ ದಾಂಡೇಲಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬಾಗಲಕೋಟೆಯ ವಿದ್ಯಾಪ್ರಸಾರಕ ಮಂಡಳದ ಕಾನೂನು ಸಲಹೆಗಾರರೂ ಹಾಗೂ ಕಾರ್ಯದರ್ಶಿಯಾಗಿದ್ದ ದೇಶಪಾಂಡೆ ಅವರು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬೆಳಗಾವಿಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ದಾಂಡೇಲಿಗೆ ತೆರಳಿ, ಬುಧವಾರ ಸಂಜೆ ಮರಳಿ ಬಾಗಲಕೋಟೆಗೆ ಬರುವ ಯೋಜನೆಯಲ್ಲಿದ್ದರು ಎನ್ನಲಾಗಿದೆ.
ಮಂಗಳವಾರ ಸಂಜೆ ಬೆಳಗಾವಿಯಿಂದ ದಾಂಡೇಲಿಗೆ ತೆರಳುವ ಮಾರ್ಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಪುತ್ರ ಸಾಗರ ಅವರ ನಿಯಂತ್ರಣ ತಪ್ಪಿದ ವಾಹನ ಹೆದ್ದಾರಿ ಪಕ್ಕದಲ್ಲಿ ಬಿದ್ದಿದ್ದು, ಈ ವೇಳೆ ಹಿರಿಯ ವಕೀಲ ದೇಶಪಾಂಡೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪತ್ನಿ, ಪುತ್ರ ತೀವ್ರ ಗಾಯಗೊಂಡಿದ್ದು, ಕುಟುಂಬದ ಇತರ ಸದಸ್ಯರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂತಾಪ: ಬಿಟಿಡಿಎ ಕಾನೂನು ಸಲಹೆಗಾರರೂ ಆಗಿರುವ ಹಿರಿಯ ವಕೀಲ, ವಿಪ್ರ ಸಮಾಜದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ ಅವರ ನಿಧನಕ್ಕೆ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ, ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ, ಮಾಜಿ ಸಚಿವ ಎಸ್.ಆರ್. ಪಾಟೀಲ, ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್‌ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ, ಬೀಳಗಿ ಶಾಸಕ ಜೆ.ಪಾಟೀಲ, ಖ್ಯಾತ ವೈದ್ಯರಾದ ಎಸ್.ಟಿ. ಪಾಟೀಲ, ಡಾ|ದೇವರಾಜ ಪಾಟೀಲ ಮುಂತಾದವರು ಸಂತಾಪ ಸೂಚಿಸಿದ್ದಾರೆ.