ಮನೆ ಸುದ್ದಿ ಜಾಲ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆ: ಮೈಸೂರಿನ ಕಿಕ್ ಬಾಕ್ಸರ್‌ ನಿಖಿಲ್‌ ಸಾವು

ಕಿಕ್‌ ಬಾಕ್ಸಿಂಗ್‌ ಸ್ಪರ್ಧೆ: ಮೈಸೂರಿನ ಕಿಕ್ ಬಾಕ್ಸರ್‌ ನಿಖಿಲ್‌ ಸಾವು

0

ಮೈಸೂರು (Mysuru): ಕೆ–ಒನ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕ ಆಯೋಜಿಸಿದ್ದ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ನಗರದ ಹೊಸಕೇರಿಯ ಕಿಕ್‌ ಬಾಕ್ಸರ್‌ ಮೃತಪಟ್ಟಿರುವ ಘಟನೆ ನಡೆದಿದೆ.

ಕಿಕ್‌ ಬಾಕ್ಸರ್‌ ಎಸ್‌.ನಿಖಿಲ್‌ (23) ಮೃತಪಟ್ಟವರು. ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಖಿಲ್‌ ಕೊನೆಯುಸಿರೆಳೆದಿದ್ದಾರೆ. ಆಯೋಜಕರ ನಿರ್ಲಕ್ಷ್ಯದಿಂದಲೇ ಉತ್ತಮ ಕ್ರೀಡಾಪಟುವನ್ನು ಕಳೆದುಕೊಂಡಂತಾಗಿದೆ ಎಂದು ಆರೋಪಿಸಲಾಗಿದೆ.

ಪಂದ್ಯದಲ್ಲಿ ನಿಖಿಲ್‌ಗೆ ಪೆಟ್ಟು ಬಿದ್ದಿರುವುದಾಗಿ ಸಹಾಯಕ ಕೋಚ್‌ಗಳು ಭಾನುವಾರ ಸಂಜೆ ತಿಳಿಸಿದ್ದರು. ನಿಖಿಲ್ ತಂದೆ ಸುರೇಶ್‌ ಅವರೊಂದಿಗೆ ಅಂದು ರಾತ್ರಿಯೇ ಬೆಂಗಳೂರಿಗೆ ತೆರಳುವಷ್ಟರಲ್ಲಿ ನಾಗರಬಾವಿಯ ಜಿ.ಎಂ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞೆ ಕಳೆದುಕೊಂಡಿದ್ದ ನಿಖಿಲ್‌ಗೆ ಪ್ರಾರಂಭದ 30 ನಿಮಿಷ ಆಮ್ಲಜನಕ ವ್ಯವಸ್ಥೆ ಇರಲಿಲ್ಲವೆಂದು ವೈದ್ಯರು ಹೇಳಿದ್ದರು ಎಂದು ಕೋಚ್‌ ವಿಕ್ರಂ ತಿಳಿಸಿದ್ದಾರೆ.

ಆಯೋಜಕರು ಯಾವುದೇ ಆಂಬುಲೆನ್ಸ್‌, ಸ್ಟ್ರೆಚರ್‌ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿರಲಿಲ್ಲ. ಘಟನೆಯು 5ನೇ ಮಹಡಿಯಲ್ಲಿ ನಡೆದಿದ್ದು, ಸ್ಟ್ರೆಚರ್‌ ಕೂಡ ಇಲ್ಲದೆ ಕೆಳಮಹಡಿಗೆ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಮ್ಲಜನಕದ ಸೌಲಭ್ಯ ಸಿಗದಿದ್ದರಿಂದ ಶ್ವಾಸಕೋಶಕ್ಕೆ ಹೆಚ್ಚು ಹಾನಿಯಾಗಿತ್ತು. ರಕ್ತಸ್ರಾವವೂ ಹೆಚ್ಚಾಗಿತ್ತು. ಸೋಮವಾರ ಸಿ.ಟಿ ಸ್ಕ್ಯಾನ್‌ನಲ್ಲೂ ಸ್ಥಿತಿ ಗಂಭೀರವಾಗಿ ಕಂಡು ಬಂದಿತ್ತು. ಮಣಿಪಾಲ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರೂ ಸ್ಪಂದಿಸಲಿಲ್ಲ. ಮಾರ್ಷಲ್‌ ಆರ್ಟ್ಸ್‌ ಕುಟುಂಬದ ನಿಖಿಲ್‌ ಉತ್ತಮ ಅಥ್ಲಿಟ್‌ ಆಗುವ ಕನಸು ಕಂಡಿದ್ದರು ಎಂದಿದ್ದಾರೆ.

ಕಿಕ್‌ ಬಾಕ್ಸಿಂಗ್‌ ಆಯೋಜಕರಿಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.