ಮನೆ ಅಪರಾಧ ಮಾರಣಾಂತಿಕ ಹಲ್ಲೆಯಿಂದಾಗಿ ಕಿಡ್ನಿ ವೈಫಲ್ಯ: ಮಂಡಿ ಠಾಣೆಯ ನಾಲ್ವರ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ

ಮಾರಣಾಂತಿಕ ಹಲ್ಲೆಯಿಂದಾಗಿ ಕಿಡ್ನಿ ವೈಫಲ್ಯ: ಮಂಡಿ ಠಾಣೆಯ ನಾಲ್ವರ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ

0

ಮೈಸೂರು: ಕಳ್ಳತನ  ಶಂಕೆಯ ಮೇಲೆ ವ್ಯಕ್ತಿಯನ್ನು ಕರೆತಂದು ಆತನ ಮೇಲೆ  ಹಲ್ಲೆ ಮಾಡಿ, ಅತನ ಕಿಡ್ನಿ ವೈಫಲ್ಯಕ್ಕೆ ಕಾರಣರಾದ ಆರೋಪದಡಿ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರ ವಿರುದ್ಧ ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Join Our Whatsapp Group

ಈ ಹಿಂದೆ ಮಂಡಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ನಾರಾಯಣ ಸ್ವಾಮಿ, ಕಾನ್ಸ್ ಟೇಬಲ್ ಗಳಾದ ರವಿಗೌಡ, ಶಂಕರ್, ಹೆಡ್ ಕಾನ್ ಸ್ಟೇಬಲ್ ರಾಜೇಂದ್ರ ಎಂಬುವವರಿಂದ ಹಲ್ಲೆಗೊಳಗಾದ ಮುತ್ತು ದೂರು ದಾಖಲಿಸಿದ್ದಾರೆ.

ಈ ಹಿನ್ನಲೆಯಲ್ಲಿ ನ್ಯಾಯಾಲಯದ ನಿರ್ದೇಶಿತ ದೂರಿನ ಆಧಾರದ ಮೇಲೆ ಎಸ್.ಸಿ ಮತ್ತು ಎಸ್ ಟಿ ಆಕ್ಟ್ ಹಾಗೂ ಕಲಂ 120ಬಿ, 82, 211, 343, 469 ಐಪಿಸಿ ರೀತ್ಯಾ ಮಂಡಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

ಅಂತೆಯೇ ಮಾನವ ಹಕ್ಕುಗಳ ಆಯೋಗಕ್ಕೆ ಖಾಸಗಿ ದೂರು  ಸಲ್ಲಿಸಲಾಗಿದೆ.

ಏನಿದು ಪ್ರಕರಣ ?

2020ರ ಮಾರ್ಚ್ ತಿಂಗಳಿನಲ್ಲಿ ಸುಬ್ಬಯ್ಯ ಹಾಗೂ ಮಯೂರ ಎಂಬ ಕಳ್ಳರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದಾರೆ. ಈ ವೇಳೆ ಆತ ಬನ್ನಿಮಂಟಪ ನಿವಾಸಿ ರವಿ ಎಂಬುವವರ ಮನೆಯಲ್ಲಿ ನನ್ನ ಬ್ಯಾಗ್ ಇಟ್ಟಿದ್ದೇನೆ ಎಂದು ಹೇಳಿದ್ದಾನೆ. ಅವರ ಮನೆಗೆ ತೆರಳಿದ ಪೊಲೀಸರು ಬ್ಯಾಗ್ ಪರಿಶೀಲನೆ ವೇಳೆ ಒಂದು ಚಿನ್ನದ ಸರ ಸಿಕ್ಕಿರುತ್ತದೆ.  ಹೀಗಾಗಿ ರವಿ ಕೂಡ ಕಳ್ಳತನದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆಯ ಮೇಲೆ ಆತನನ್ನು ವಿಚಾರಣೆಗೆ ಕರೆತಂದು ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ಸಂಬಂಧ ರವಿ ಅವರ ಸಂಬಂಧಿಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರು ದೂರು ನೀಡಿರುವಂತೆ ರವಿ ಅವರನ್ನು ನೋಡಲು ಠಾಣೆಗೆ ಹೋಗಿದ್ದ ಸಂದರ್ಭದಲ್ಲಿ ಆತನ ಬಟ್ಟೆ ಬಿಚ್ಚಿಸಿ, ಟೇಬಲ್ ಮೇಲೆ ಕೈಕಾಲುಗಳನ್ನು ಕಟ್ಟಿ ಹಾಕಿ,  ನೀನು, ರವಿ, ಮಯೂರ ಹಾಗೂ ಸುಬ್ಬಯ್ಯ ಅವರ ಜೊತೆ ಸೇರಿಕೊಂಡು ಎಷ್ಟು ಕಳ‍್ಳತನ ಮಾಡಿದ್ದೀಯಾ ಎಂದು  ಪ್ರಶ್ನಿಸಿ ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲದೇ 2 ಮತ್ತು 3ನೇ ಆರೋಪಿಗಳು ಸೇರಿ ದೊಣ್ಣೆಯಿಂದ ಹೊಡೆದು ಬೂಟು ಕಾಲುಗಳಿಂದ ಒದ್ದು ತೀವ್ರವಾಗಿ ಗಾಯಗೊಳಿಸಿದ್ದಾರೆ.

ತದ ನಂತರ ಪೊಲೀಸರು  ಮಂಡಿ ಠಾಣೆಯ ಉಪ ಪೊಲೀಸ್ ನಿರೀಕ್ಷಕರು ಗಾಯಗೊಂಡ ಮುತ್ತುವಿಗೆ ಚಿಕಿತ್ಸೆ ಕೊಡಿಸದೇ ಸಂತೆಮರಳ್ಳಿ, ಸುತ್ತಮುತ್ತಲಿನ ಊರುಗಳಿಗೆ ಕರೆದುಕೊಂಡು ಹೋಗಿ ಸುತ್ತಿಸಿದ್ದಾರೆ. ಆತ ಅಸ್ವಸ್ಥನಾದ ಬಳಿಕ ಬಂಬೂಬಜಾರ್ ನಲ್ಲಿರುವ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.  ಈ ಸಂದರ್ಭದಲ್ಲಿ ಮುತ್ತುನನ್ನು ಪರಿಶೀಲಿಸಿದ ವೈದ್ಯರು ಹಲ್ಲೆ ಪರಿಣಾಮ ಕಿಡ್ನಿ ವೈಫಲ್ಯವಾಗಿರುವುದಾಗಿ ತಿಳಿಸಿದ್ದಾರೆ..

ತಮ್ಮ ತಪ್ಪನ್ನು ಮರೆ ಮಾಚಲು ಪೊಲೀಸರು ಮಿಷನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿ, ರವಿ ಎಂಬಾತನೊಂದಿಗೆ ಕಳ್ಳತನ  ಮಾಡಿರುವುದಾಗಿ ಸುಳ್ಳು ದಾಖಲೆ ಸೃಷ್ಠಿಸಿ ಆರೋಪಿಯನ್ನಾಗಿ ಮಾಡಿದ್ದಾರೆ.  ಬಳಿಕ ಕಿಡ್ನಿ ವೈಫಲ್ಯವಿರುವ ಕಾರಣದಿಂದಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ದಾಖಲೆಗಳಿಗೆ ಸಹಿ ಮಾಡಿಸಿಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ವಕೀಲರನ್ನು ನೇಮಕ ಮಾಡಿ ಬಿಡುಗಡೆ ಮಾಡಿ ಮನೆಗೆ ಕಳುಹಿಸಿರುತ್ತಾರೆ. ಬಳಿಕ ಮನೆಗೆ ಆಗಮಿಸಿದ ಪೊಲೀಸರು ಮಿಷನ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಮಾಡಿಸಿದ್ದು, ಬಿಬಿ ಆಯಿಶಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ.

ಇದೀಗ ಮುತ್ತು ಪೊಲೀಸರ ಹಲ್ಲೆಯಿಂದ ಅನಾರೋಗ್ಯ ಪೀಡಿತನಾಗಿದ್ದು, ಆತನ ಸ್ಥಿತಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು, ನ್ಯಾಯಾಲಯದ ಆದೇಶದಂತೆ ನಾಲ್ವರು ಪೊಲೀಸರ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.