ಎಕ್ಯೂಟ್ ಗ್ಲೋಮರೂಲೊ ನೆಫ್ರೈಟಿಸ್
5-12 ವರ್ಷದ ಮಕ್ಕಳಿಗೆ ಎಕ್ಯೂಟ್ ಗ್ಲೋಮರೂಲೊ ನೆಫ್ರೈಟಿಸ್ ಗೆ ಸಂಬಂಧಿಸಿದ ಮೂತ್ರಪಿಂಡ ರೋಗ ಕಂಡುಬರುತ್ತದೆ. ಈ ರೋಗ ಬರಲು ಸ್ಟ್ರೆಪ್ಟ್ಟೋಕೋಕಲ್ ಬ್ಯಾಕ್ಟೀರಿಯಾ ಮುಖ್ಯ ಕಾರಣ.
ಈ ರೋಗ ಬರುವ ಮುಂಚೆ ಮಗುವಿನಲ್ಲಿ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಇಲ್ಲವೇ ಮೈಮೇಲೆ ಕೀವಿಗುಳ್ಳೆಗಳೇಳುತ್ತವೆ. ಹೀಗೆ ಗಂಟಲು ನೋವು ಬಂದ 10-15 ದಿನಗಳಲ್ಲಿ; ಇಲ್ಲವೆ ಕೀವುಗುಳ್ಳೆಗಳು ಬಂದ 3-6 ವಾರಗಳಲ್ಲಿ ಎಕ್ಯೂಟ್ ಗ್ಲೋಮರೂಲೊ ನೆಫ್ರೈಟಿಸ್ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗ ಬಂದ ಮಗುವಿನ ಮುಖ ಉಬ್ಬಿದಂತಿರುತ್ತದೆ. ಮೂತ್ರದಲ್ಲಿ ರಕ್ತ ಹೋಗುತ್ತದೆ. ಮೂತ್ರ ಹೇಗೆ ಬಣ್ಣದಲ್ಲಿ ಇರುತ್ತದೆ, ಇಲ್ಲವೇ ಟೀ ಬಣ್ಣದಲ್ಲಿ ಅಥವಾ ಕೋಲಾ ಬಣ್ಣದಲ್ಲಿರುತ್ತದೆ. ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ. ಒಂದೆರಡುವಾರಗಳಲ್ಲಿ ಈ ಲಕ್ಷಣ ಕಡಿಮೆಯಾದರು ಕೂಡ ಮೂತ್ರದಲ್ಲಿ ಅಷ್ಟಿಷ್ಟು ರಕ್ತ 6-12 ತಿಂಗಳು ವರೆಗೆ ಹೋಗುತ್ತದೆ.
ರೋಗ ನಿರ್ಧಾರ :-
ಮೂತ್ರ ಪರೀಕ್ಷೆ ಮಾಡಿದಾಗ ಅದರಲ್ಲಿ ಕೆಂಪು ರಕ್ತ ಕಣಗಳು ಅಲ್ಬುಮಿನ್, ಕೀವಿನ ಕಣಗಳು ಇರುತ್ತವೆ.
ಚಿಕಿತ್ಸೆ :-
ರೋಗಲಕ್ಷಣಗಳು ಹೆಚ್ಚಾಗಿದ್ದಾಗ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ಕೊಡಿಸಬೇಕು. ಬ್ಯಾಕ್ಟೀರಿಯಾ ಸೋಂಕು ಕಡಿಮೆಯಾಗಲು ಬ್ಯಾಕ್ಟೀರಿಯಾ ನಿರೋಧಕ ಔಷಧಿಗಳನ್ನು ಬಳಸಬೇಕು. ಸೂಕ್ತವಾಗಿ ಔಷಧಿ ಬಳಸಿದರೆ ಶೇ. 95 ಸಂದರ್ಭದಲ್ಲಿ ರೋಗ ಸಂಪೂರ್ಣ ವಾಸಿಯಾಗುತ್ತದೆ. ನಿರ್ಲಕ್ಷಿಸಿದರೆ ದೀರ್ಘಾವಧಿ ರೋಗವಾಗಿ ಬದಲಾಗುತ್ತದೆ.
ಎಕ್ಯೂಟ್ ರೀನಲ್ ವೈಪಲ್ಯ :-
ಸಂಪೂರ್ಣ ಮೂತ್ರವೇ ಉತ್ಪತ್ತಿಯಾಗದಿದ್ದರೆ ಇಲ್ಲವೇ ಅತಿ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾದರೆ, ಅದನ್ನು ಎಕ್ಯೂಟ್ ರೀನಲ್ ವೈಫಲ್ಯವೆಂದು ಹೆಸರಿಸುತ್ತಾರೆ. ಕಿಡ್ನಿ ಫಂಕ್ಷನ್ ಸಂಪೂರ್ಣ ವಿಫಲವಾದಾಗ ಎಕ್ಯೂಟ್ ರೀನಲ್ ವೈಫಲ್ಯವಾಗುತ್ತದೆ. ಎಕ್ಯೂಟ್ ರೀನಲ್ ವೈಫಲ್ಯದಿಂದಾಗಿ ಸಾರಜನಕ ಮತ್ತಿತರ ಮಲಿನ ವಸ್ತುಗಳು ರಕ್ತಕ್ಕೆ ಸೇರುತ್ತದೆ.
ಎಕ್ಯೂಟ್ ರೀನಲ್ ವೈಫಲ್ಯಗಳನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ.
1. ಪ್ರೀ ರೀನಲ್
2. ರೀನಲ್
3. ಪೋಸ್ಟ್ ರೀನಲ್
ಪ್ರೀ ರೀನಲ್ ವಿಭಾಗದ ವೈಫಲ್ಯದಲ್ಲಿ, ಹುಟ್ಟಿದಾಗ ಯಾವುದೋ ಕಾರಣದಿಂದ ಆಮ್ಲಜನಕ ಸಾಕಷ್ಟು ಪೂರೈಕೆಯಾಗದೆ ಉಸಿರಾಡಲು ಕಷ್ಟವಾಗಿರುವುದು ಕಾರಣವಾಗಿರುವುದೇ ಅಲ್ಲದೆ ನ್ಯುಮೋನಿಯಾ, ಸೆಪ್ಸಿಸ್, ರಕ್ತದ ಕೊರತೆ ಮತ್ತಷ್ಟು ಕಾರಣಗಳು. ಈ ಪರಿಸ್ಥಿತಿಗಳಿದ್ದಾಗ ಕಿಡ್ನಿಯ ಮೂಲಕ ರಕ್ತ ಶೋಧಿಸಲ್ಪಡುವುದಿಲ್ಲ. ರೀನಲ್ ವಿಭಾಗದ ವೈಫಲ್ಯವೆಂದರೆ ಮೂತ್ರಪಿಂಡದ ರೋಗಗಳಿರುವುದೇ ಕಾರಣವಾಗುತ್ತದೆ. ಪೋಸ್ಟ್ ರೀನಲ್ ವಿಭಾಗದಲ್ಲಿ ಮೂತ್ರನಾಳಗಳಲ್ಲಿ ಅಡ್ಡಿಯುಂಟಾಗಿ ಮೂತ್ರ ವಿಸರ್ಜನೆಯಾಗದಿರುವುದನ್ನು ಕಾರಣವಾಗುತ್ತದೆ.
ಎಕ್ಯೂಟ್ ರೀನಲ್ ವೈಫಲ್ಯವಿದ್ದಾಗ ಮೇಲಿನ ಮೂರು ವಿಭಾಗಗಳನ್ನ ಗಮನದಲ್ಲಿಟ್ಟುಕೊಂಡು ಕಾರಣವನ್ನು ಪರಿಶೀಲಿಸಬೇಕು. ಈ ಸಮಸ್ಯೆ ಇದ್ದಾಗ ಮೂತ್ರ ಕಡಿಮೆಯಾಗುತ್ತದೆ. ಮುಖ, ಮೈಗೆ ನೀರು ಸೇರುತ್ತದೆ. ಮಗು ನಿಸ್ತೇಜವಾಗಿರುತ್ತದೆ. ವಾಂತಿ ಕೂಡ ಆಗುತ್ತದೆ. ಇದು ಮುಖ್ಯ ಲಕ್ಷಣಗಳು. ಮೂತ್ರದ ಮೂಲಕ ನೀರು ಹೊರ ಹೋಗದಿರುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ನೀರು ಸೇರುತ್ತದೆ.
ನಿರ್ಧರಿಸುವುದು :-
ಮೂತ್ರ ಪರೀಕ್ಷೆಯಿಂದ ಸುಳಿವು ಸಿಗುತ್ತಾದರೂ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಕಾರಣವನ್ನು ನಿರ್ಧರಿಸಬಹುದು.
ಚಿಕಿತ್ಸೆ :-
ಎಕ್ಯೂಟ್ ರೀನಲ್ ವೈಫಲ್ಯವಾದಾಗ ರಕ್ತದಲ್ಲಿ ಪೋಟಾಸಿಯಂ ಪ್ರಮಾಣ ಏರಿಕೆಯಾಗುತ್ತದೆ. ರಕ್ತದೊತ್ತಡವು ಏರುತ್ತದೆ. ಶ್ವಾಶಕೋಶಗಳಲ್ಲಿ ನೀರು ಸೇರುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಮಾಡಬೇಕು. ನೀರು ಕೊಡುವುದನ್ನ ಕಡಿಮೆ ಮಾಡಬೇಕು. ಅಗತ್ಯವಾದರೆ ಡಯಾಲಿಸಿಸ್ ಮಾಡಬೇಕು.
- ಮುಂದುವರೆಯುತ್ತದೆ…