ಮನೆ ಸುದ್ದಿ ಜಾಲ ಜುಲೈ 21 ರಂದು ರೈತ ಹುತಾತ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಕಿರಂಗೂರು ಪಾಪು ಒತ್ತಾಯ

ಜುಲೈ 21 ರಂದು ರೈತ ಹುತಾತ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಕಿರಂಗೂರು ಪಾಪು ಒತ್ತಾಯ

0

ಮಂಡ್ಯ : ಜುಲೈ ೨೧ ರಂದು ರೈತ ಹುತಾತ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಸರ್ಕಾರದ ವತಿಯಿಂದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರೈತ ಹುತಾತ್ಮ ದಿನವನ್ನಾಗಿ ಆಚರಣೆ ಮಾಡಲು ಸರ್ಕಾರದ ಸಚಿವ ಸಂಪುಟದ ಸಚಿವರೊಂದಿಗೆ ಚರ್ಚಿಸಿ ತೀರ್ಮಾ ಕೈಗೊಳ್ಳಬೇಕು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಕಿರಂಗೂರು ಪಾಪು ಮೋಹನ್‌ಕುಮಾರ್ ಒತ್ತಾಯಿಸಿದ್ದಾರೆ.

ಈ ದೇಶದ ಬೆನ್ನೆಲುಬು ಅನ್ನದಾತ, ರೈತ ಎಂದು ಬೊಬ್ಬೆ ಹೊಡೆಯುವ ಸರ್ಕಾರಗಳು, ರೈತರು ತಮ್ಮ ಭೂಮಿಯಲ್ಲಿ ಬೆಳೆಗಳನ್ನು ಬೆವರು ಸುರಿಸಿ ಬಿತ್ತು , ಸಾಲಸೋಲ ಮಾಡಿ, ಚಿನ್ನಾಭರಣಗಳನ್ನು ಅಡವಿಟ್ಟು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ವೈಜ್ಞಾನಿಕ ಬೆಲೆ ಸಿಗದೇ ಇರುವ ಸಂದರ್ಭದಲ್ಲಿ ರೈತಾಪಿ ವರ್ಗಕ್ಕೆ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡುವುದು ಅವರ ಹಕ್ಕು. ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಮಾಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭದಲ್ಲಿ ತಮ್ಮ ಬದುಕನ್ನು ಲೆಕ್ಕಿಸದೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗುತ್ತಾರೆ ಅನ್ನದಾತರು. ಅಂಥ ಹೋರಾಟಗಳನ್ನು ನೋಡಿದ್ದೇವೆ. ಶಾಂತಿಯುತ ಹೋರಾಟಗಳಲ್ಲಿ ಹತನಾದ ನೂರಾರು ಗೌರವಾನ್ವಿತ ರೈತರು, ಹೋರಾಟಗಾರರು ಪ್ರಾಣ ತ್ಯಾಗಗಳನ್ನು ಮಾಡಿದ್ದಾರೆ. ಕೇವಲ ರಾಸಾಯನಿಕ ಗೊಬ್ಬರ ಸಿಗದೇ ಇದ್ದಾಗಲೂ ಹೋರಾಡಿದ ರೈತರಿಗೆ ಕೆಲವು ಸರ್ಕಾರಗಳು ಗುಂಡೇಟು ಹೊಡೆಸಿ ಬಲಿ ಪಡೆದಿರುವ ಪ್ರಕರಣಗಳು ಸಾಕಷ್ಟಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದೇಶದ ರೈತರು ನೆಮ್ಮದಿಯಾಗಿ ಬದುಕಲು ಬಿಡದೆ ಅವರ ಬದುಕನ್ನು ಅವನತಿಗೆ ಅಂಚಿಗೆ ತಳ್ಳುತ್ತಾ ಇವೆ. ರೈತರ ಕಷ್ಟ-ಕಾರ್ಪಣ್ಯಗಳನ್ನು ನೋಡಿಯೂ ಹೋರಾಟಗಾರರ ಕಿಚ್ಚು ಹೆಚ್ಚಾದಾಗ ಸರ್ಕಾರಗಳ ವಿರುದ್ಧ ನಡುಕು ಹುಟ್ಟಿಸುವಂಥ ಹೋರಾಟಗಳನ್ನು ನೋಡಿ ಸರ್ಕಾರಗಳು  ಮಂಡಿಯೂರಿ ಕುಳಿತಿರುವ ಸಂದರ್ಭಗಳನ್ನೂ ನೋಡಿದ್ದೇವೆ. ಅಂಥ ಸಂದರ್ಭದಲ್ಲಿ ಹೋರಾಟ ಪ್ರಾಬಲ್ಯವಾದಾಗ ರೈತರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದಾಗ ಲಕ್ಷಾಂತರ ರೈತರು ಸೇರಿ ಸರ್ಕಾರಗಳ ವಿರುದ್ಧ ಧಂಗೆ ಹೇಳಿದಾಗ ಕೆಲವು ಕಿಡಿಗೇಡಿ ಸರ್ಕಾರಗಳು ರೈತಹೋರಾಟಗಾರರ ಮೇಲೆ ಗುಂಡು ಹಾರಿಸಿರುವುದನ್ನು ರೈತಕುಲಕ್ಕೆ ಅವಮಾನ ಮಾಡಿವೆ. ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ, ಬೆಳೆಗಳು ನಷ್ಟವುಂಟಾದಾಗ ಸಾಲದ ಸುಳಿಗೆ ಸಿಲುಕಿಕೊಂಡು ದಿಕ್ಕು ದೋಚದೆ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಕಟ್ಟಲಾಗದೆ ಹೆದರಿ ತಮ್ಮ ಕುಟುಂಬಗಳ ಬಗ್ಗೆ ಚಿಂತೆಯನ್ನೂ ಮಾಡದೇ ಸಾವಿರಾರು ಅನ್ನದಾತರು.

ಆತ್ಮಹತ್ಯೆಗೆ ಕೊರಳೊಡ್ಡಿದ್ದಾರೆ. ಅವರ ಕುಟುಂಬಗಳು ಬೀದಿ ಪಾಲಾಗಿವೆ. ಸರ್ಕಾರಗಳು ಮಾಡಿದ ತಪ್ಪಿಗೆ ರೈತರು ಬಲಿಯಾಗುತ್ತಾ ಬಂದಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಗಳು ರೈತ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಸರ್ಕಾರಗಳಿಗೆ ನೈತಿಕತೆ ಇದ್ದರೆ ದೇಶದ ಬೆನ್ನೆಲುಬು ರೈತರ ಬೆಳೆಗಳಿಗೆ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ ಕೃಷಿಗೆ ಶೇ.೫೦ರಷ್ಟು ಮೀಸಲಿಡಬೇಕು ಹಾಗೂ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಸರ್ಕಾರಿ ಕಛೇರಿಯಲ್ಲಿ ರೈತರನ್ನು ಗೌರವಯುತವಾಗಿ ನಡೆಸಿಕೊಂಡು, ಆಗಬೇಕಾದ ಕಂದಾಯ ಇಲಾಖೆ ಇನ್ನಿತರೆ ಕಛೇರಿಗಳಲ್ಲಿ ಕೆಲಸಕಾರ್ಯಗಳನ್ನು ಯಾವುದೇ ಲಂಚಗುಳಿತನವಿಲ್ಲದೇ ಶೀಘ್ರಗತಿಯಲ್ಲಿ ನಡೆಸಿಕೊಡಬೇಕು. ಜುಲೈ ೨೧ರಂದು ರೈತ ಹುತಾತ್ಮರ ದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಣೆ ಮಾಡಿ ಸರ್ಕಾರದ ಎಲ್ಲಾ ಕಛೇರಿಗಳಲ್ಲಿ ಆಚರಣೆ ಮಾಡಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀರ್ಮಾನಿಸುವ ಮೂಲಕ ರೈತರನ್ನು ಗೌರವಿಸಬೇಕೆಂದು ಮತ್ತೊಮ್ಮೆ ಕಿರಂಗೂರು ಪಾಪು ಕಳಕಳಿಯಿಂದ ಒತ್ತಾಯಿಸಿದ್ದಾರೆ.