ಮನೆ ಸ್ಥಳೀಯ ಕನ್ನಡ ನಾಡಿನ ಹೆಸರನ್ನು ಭೂಗೋಳದಲ್ಲಿ ಅವಿಸ್ಮರಣೀಯ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ: ಡಾ....

ಕನ್ನಡ ನಾಡಿನ ಹೆಸರನ್ನು ಭೂಗೋಳದಲ್ಲಿ ಅವಿಸ್ಮರಣೀಯ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ: ಡಾ. ಪುಷ್ಪಾ ಅಮರನಾಥ್

0

ಮೈಸೂರು: ರಾಣಿ ಚೆನ್ನಮ್ಮ ಅವರು ಕನ್ನಡ ನಾಡಿನ ಹೆಸರನ್ನು ಭೂಗೋಳದಲ್ಲಿ ಅವಿಸ್ಮರಣೀಯ ಮಾಡಿದ ವೀರ ಮಹಿಳೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಅವರು ಹೇಳಿದರು.

Join Our Whatsapp Group

ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವು ಇತಿಹಾಸವನ್ನು ನೆನಪಿಸಿಕೊಳ್ಳುವ ಪ್ರಮುಖವಾದ ದಿನ. ಚೆನ್ನಮ್ಮ ಎಂಬ ಹೆಸರನ್ನು ಕೇಳಿದಾಕ್ಷಣ ಎಲ್ಲರಲ್ಲೂ ಮೈ ರೋಮಾಂಚನಗೊಳಿಸುವoತಹ ಶಕ್ತಿ ಎಂದರು.

ರಾಣಿ ಚೆನ್ನಮ್ಮ ಭಾರತ ದೇಶದಲ್ಲಿ ಎಲ್ಲರ ಮನಸನ್ನು ಗೆದ್ದಂತಹ ಅಪ್ರತಿಮ ಹೋರಾಟಗಾರ್ತಿ, ಇತಿಹಾಸದಲ್ಲಿಯೇ ಮಹಿಳೆಯರಲ್ಲಿ ಮಂಚೂಣಿಯಲ್ಲಿರುವ ಹೆಸರು ಇವರದು. ಚೆನ್ನಮ್ಮ ಅವರು ಬ್ರಿಟಿಷರಿಗೆ ‘ನಿಮಗೇಕೆ ಕೊಡಬೇಕು ಕಪ್ಪ’ ಎಂಬ ಸವಾಲಿನ ಮಾತನ್ನು ನೆನಪಿಸುತ್ತಾ ನಮ್ಮ ನಾಡಿನ ಮಹಿಳೆಯರು ಹಾಗೂ ಪುರುಷರಲ್ಲಿ ದೇಶ ಭಕ್ತಿಯನ್ನು ಹಚ್ಚಿ, 128 ವರ್ಷಗಳ ಮುಂಚೆಯೇ ಸ್ವಾತಂತ್ರ್ಯದ  ಕಿಚ್ಚನ್ನು ಬೆಳಗಿಸಿದರು. ಯಾವುದೇ ಒಂದು ಕೆಲಸ ಅಥವಾ ಸವಾಲನ್ನು ತೆಗೆದುಕೊಳ್ಳುವಾಗ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಕೊಡುವಂತಹ ಶಕ್ತಿ ಈಕೆಯದ್ದು. ಬುದ್ಧ, ಬಸವವಣ್ಣನವರ ಹಾದಿಯಲ್ಲಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ಆರಿಸುವಲ್ಲಿ ಇವರ ಕೊಡುಗೆಯನ್ನು ಅಪಾರ ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ಶಾಸಕರಾದ ಸಿ.ಎನ್ ಮಂಜೇಗೌಡ ಅವರು ಮಾತನಾಡಿ, ಪ್ರಸ್ತುತ ಕಾಲಮಾನದಲ್ಲಿ ಇತಿಹಾಸವನ್ನು ತಿಳಿದುಕೊಳ್ಳವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಏಕೆಂದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ ಇವರೆಲ್ಲರೂ ತಮ್ಮ ಪ್ರಾಣವನ್ನು ದೇಶದ ಏಳಿಗೆಗೆ, ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ರಕ್ಷಣೆಗಾಗಿ ಬಲಿದಾನ ಮಾಡಿದಂತಹ ಮಹಾನ್ ವ್ಯಕ್ತಿಗಳಾಗಿರುತ್ತಾರೆ. ಇಂತಹ ಮಹಾನ್ ದಾರ್ಶನಿಕರನ್ನು ನಾವು ಸ್ಮರಿಸಿಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕು. ಬದುಕು ಬದುಕಾಗಬೇಕಾದರೆ, ಬದುಕಿಹೋದಂತಹವರ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕು ಎಂದು ಆಗ ನಮ್ಮ ಬದುಕಿಗೆ ಒಂದು ಸಾರ್ಥಕತೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿಗಳಾದ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರು ಮಾತನಾಡಿ, ನಾವೆಷ್ಟು ನಮ್ಮ ದೇಶ, ಭಾಷೆಯ ಬಗ್ಗೆ ಪ್ರಾಮಾಣಿಕತೆ ಹಾಗೂ ಛಲವನ್ನು ಅಳವಡಿಸಿಕೊಂಡಿದ್ದೇವೆ ಎಂಬ ಚಿಂತೆಯು ಕಿತ್ತೂರು ರಾಣಿ ಚೆನ್ನಮ್ಮನ ವಿಜಯೋತ್ಸವದ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬೇಕು. ಈ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ದಿಟ್ಟ ಕನಸನ್ನು ಇಟ್ಟುಕೊಂಡು ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಈಕೆಯ ಬದುಕು, ಹೋರಾಟ ಅನನ್ಯ. ಅವರ ದೇಶಪ್ರೇಮ ಎಲ್ಲರಿಗೂ ಅನುಕರಣೀಯವಾಗಿದ್ದು ಎಂದರು.

ನಾಡಿನ ಜನರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಹುರಿದುಂಬಿಸಿ, ಕನ್ನಡಿಗರ ಪೌರುಷ, ಸಾಹಸ, ಸ್ವಾಭಿಮಾನವನ್ನು ಹೋರಾಟದ ಮೂಲಕ ತೋರ್ಪಡಿಸಿ, ಕನ್ನಡ ನಾಡಿನ ಉಳಿವಿಗೆ ಪ್ರಾಣವನ್ನೇ ಒತ್ತೆ ಇಟ್ಟ ಧೀರ ಮಹಿಳೆ. ಆಕೆಯ ಆಪ್ತರು ಮಾಡಿದ ಕುತಂತ್ರದ ಫಲವಾಗಿ ಮೋಸ, ವಂಚನೆಯಿoದ ಬ್ರಿಟಿಷರ ದಾಳಿಗೆ ಚೆನ್ನಮ್ಮ ಬಲಿಯಾದರು ಎಂದು ವಿಷಾದಿಸಿದರು.

200ನೇ ಜಯಂತಿಯ ಈ ಸಂಧರ್ಭದಲ್ಲಿ ನಮ್ಮ ಕೊನೆಯ ಉಸಿರು ಇರುವ ತನಕ ಈ ದೇಶಕ್ಕೆ ಯಾರೆಲ್ಲ ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೋ ಅವರನ್ನ ನಾವು ಸ್ಮರಿಸಬೇಕು. ಪ್ರತಿ ಮನೆಯಲ್ಲೂ ರಾಣಿ ಚೆನ್ನಮ್ಮನಂತಹ ಮಹಿಳೆಯರು ಹುಟ್ಟಿಬರಬೇಕೆಂಬ ಆಶಯ ವ್ಯಕ್ತಪಡಿಸಿದರು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬಸವ ಜ್ಞಾನ ಮಂದಿರದ ಪೀಠಾಧ್ಯಕ್ಷರಾದ ಡಾ.ಮಾತೆ ಬಸವಾಂಜಲಿ ದೇವಿ ಅವರು ಮಾತನಾಡಿ, ಮಹಿಳೆಯರ ಶಕ್ತಿ ಅಪರವಾಗಿದ್ದು, ಅದು ಸುಪ್ತವಾಗಿ ಅಡಗಿರುತ್ತದೆ. ಅದು ವ್ಯಕ್ತವಾಗಬೇಕಾದರೆ ಅವಕಾಶಗಳು ಅವಶ್ಯಕ. ಬ್ರಿಟಿಷರ ರಾಜ ನೀತಿಯನ್ನು ಪ್ರತಿಭಟನೆ ಮಾಡಿದಂತಹ ದೊಡ್ಡ ಹೋರಾಟಗಾರ್ತಿ ಚೆನ್ನಮ್ಮ ಎಂದರು.

ಮಹಿಳೆಯರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯದ  ಹೋರಾಟಕ್ಕೆ ಕರೆಯನ್ನು ಕೊಟ್ಟಾಗ ಸಾಕಷ್ಟು ಮಹಿಳೆಯರು ಭಾಗವಹಿಸಿದಂತಹ ಕೀರ್ತಿ ಭಾರತಕ್ಕಿದೆ ಎಂದರು.

ಚೆನ್ನಮ್ಮನವರ 200 ವರ್ಷಗಳ ಸಾಧನೆಯು ನಮ್ಮ ಮಕ್ಕಳಿಗೆ ಹಾಗೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು ಮತ್ತು ದೇಶವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ದೈರ್ಯವನ್ನು ತಂದುಕೊಡುವoತಹ ಸ್ಫೂರ್ತಿ ಕಿತ್ತೂರು ಚೆನ್ನಮ್ಮ ಎಂದರು.

12 ನೆಯ ಶತಮಾನದಲ್ಲಿ ಧರ್ಮ ಮತ್ತು ವಚನ ಸಾಹಿತ್ಯದ ರಕ್ಷಣೆಗಾಗಿ ಮಹಿಳೆಯರು ಹಲವಾರು ಹೋರಾಟವನ್ನು ಮಾಡಿರುವುದು ನಿಜಕ್ಕೂ ಅಭಿನಂದನೀಯವಾಗಿದೆಯೆoದರು. ನಮ್ಮ ನಾಡು, ನುಡಿ ಧರ್ಮಕ್ಕಾಗಿ ಇಂಥಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಿ. ಎಸ್ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.