ಬೆಂಗಳೂರು(Bengaluru): ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್’ ಗೆ 3 ರೂ. ಹೆಚ್ಚಿಸಲು ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್) ನಿರ್ಧರಿಸಿದೆ.
ಕೆಎಂಎಫ್’ನ ವಾರ್ಷಿಕ ಸಭೆಯಲ್ಲಿ ಹಾಲಿನ ಮಾರಾಟ ದರ ಹೆಚ್ಚಿಸುವ ಸಂಬಂಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ದರ ಏರಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಕೆಎಂಎಫ್’ನ ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಹಾಲು ಮಾರಾಟ ದರ ಹೆಚ್ಚಿಸುವಂತೆ ಕಳೆದ 8 ತಿಂಗಳಿಂದ ಕೆಎಂಎಫ್’ನ ಮೇಲೆ ಒತ್ತಡ ಹೇರುತ್ತಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಮುಖ್ಯಮಂತ್ರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ರೈತರ ಅನುಕೂಲಕ್ಕಾಗಿ ಶೀಘ್ರವೇ ಹಾಲು ಮಾರಾಟ ದರದಲ್ಲಿ ಲೀಟರ್’ಗೆ 3 ರೂ. ಹೆಚ್ಚಳ ಮಾಡಲೇಬೇಕು. ಬೆಲೆ ಹೆಚ್ಚಳದ ಸಂಪೂರ್ಣ ಲಾಭವನ್ನು ರೈತರಿಗೆ ತಲುಪಿಸಬೇಕೆಂದು ಸಭೆಯಲ್ಲಿಒಮ್ಮತದ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಸದ್ಯ ನಂದಿನಿ ಹಾಲಿನ ಮಾರಾಟ ದರ ಲೀಟರ್’ಗೆ 37ರೂ. ಇದೆ. ಬೇರೆ ಬ್ರ್ಯಾಂಡ್’ಗಳ ಹಾಲಿನ ಬೆಲೆ ಲೀಟರ್’ಗೆ 40 ರೂ.ನಿಂದ 51 ರೂ.ವರೆಗೆ ಇದೆ. ಈ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಾಲಿನ ದರವನ್ನು 40 ರೂ.ಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದರು.