ಬೆಂಗಳೂರು: ಬಾಕಿ ವೇತನ ಬಿಡುಗಡೆಯೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನೌಕರರು ಆಗ್ರಹಿಸಿದ್ದಾರೆ.
ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನೌಕರರ ಸಂಘವು ಈಗಾಗಲೇ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರ ಕಾಲಾವಕಾಶ ನೀಡಿದೆ. ಇದು ಜನವರಿ 31ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಬೆಡಿಕೆಗಳು ಈಡೇರದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ನೌಕರರ ಸಂಘ ಎಚ್ಚರಿಕೆ ನೀಡಿದೆ.
7ನೇ ವೇತನ ಆಯೋಗದ ಶಿಫಾರಸಿನಂತೆ ನೀಡಬೇಕಿರುವ ಬಾಕಿ ಉಳಿದಿರುವ ವೇತನ ಶೀಘ್ರವೇ ಮಂಜೂರು ಮಾಡಬೇಕೆಂದು ಕೆಎಂಎಫ್ ನೌಕರರ ಸಂಘದ ಅಧ್ಯಕ್ಷ ಗೋವಿಂದಗೌಡ ಆಗ್ರಹಿಸಿದ್ದಾರೆ. 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರನ ಶೇ 25 ರ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಈ ಪೈಕಿ ಶೇ 17 ರಷ್ಟು ಮಾತ್ರ ಹೆಚ್ಚಳ ಮಾಡಿದೆ. ಶೇ 8 ರಷ್ಟು ವೇತನ ಹೆಚ್ಚಳ, ಬಿಡುಗಡೆ ಬಾಕಿ ಇದೆ. ಅವುಗಳನ್ನು ಈಡೇರಿಸಬೇಕು ಎಂದು ಗೋವಿಂದಗೌಡ ಹೇಳಿದ್ದಾರೆ. ಜತೆಗೆ, ಬೇಡಿಕೆಗಳು ಈಡೇರುವ ಭರವಸೆ ಇದೆ ಎಂದೂ ಹೇಳಿದ್ದಾರೆ.
ಸಂಘವು ರಾಜ್ಯಾದ್ಯಂತ ಸುಮಾರು 7,000 ಉದ್ಯೋಗಿಗಳನ್ನು ಒಳಗೊಂಡಿದೆ, ಅವರಲ್ಲಿ 1,400 ಉನ್ನತ ದರ್ಜೆಯ ಸಿಬ್ಬಂದಿ ಇದ್ದಾರೆ. ಇದರ ಆಧಾರದಲ್ಲಿ ಲೆಕ್ಕಹಾಕಿದರೆ, ವೇತನ ಹೆಚ್ಚಳ ಜಾರಿಗೆ ಬಂದರೆ ಅದಕ್ಕಾಗಿ ಸರ್ಕಾರ ತಿಂಗಳಿಗೆ 3 ಕೋಟಿ ರೂ. ವ್ಯಯಿಸಬೇಕಾಗುತ್ತದೆ.
ಸದ್ಯದ ಮಟ್ಟಿಗೆ, ವೇತನ ಬಾಕಿಯ ಮೊತ್ತದ ಬಿಡುಗಡೆ ಮಾಡಲು ಸರ್ಕಾರವು ಇನ್ನೂ ಅನುಮತಿ ನೀಡಿಲ್ಲ ಎಂದು ಆಡಳಿತ ಮಂಡಳಿ ಭಾವಿಸಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಎಂಎಫ್ ದಿನಕ್ಕೆ ಸುಮಾರು 1 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸುತ್ತಿದ್ದು, 15 ಒಕ್ಕೂಟಗಳ ಮೂಲಕ ಹಾಲು ಸಂಗ್ರಹಿಸುತ್ತಿದೆ.
ಇತ್ತೀಚೆಗಷ್ಟೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ ಆರ್ ಟಿಸಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೆಗೂ ಸಭೆ ನಡೆಸಿ ಕೆಎಸ್ ಆರ್ ಟಿಸಿ ನೌಕರರ ಮನವೊಲಿಸಿ ಮುಷ್ಕರದ ನಿರ್ಧಾರ ಹಿಂಪಡೆಯುವಂತೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು. ಇದೀಗ ಕೆಎಂಎಫ್ ನೌಕರರ ಸರದಿ. ಒಂದು ವೇಳೆ ಕೆಎಂಎಫ್ ನೌಕರರ ಬೇಡಿಕೆ ಈಡೇರಿಸುವಲ್ಲಿ ಅಥವಾ ಅವರ ಮನವೊಲಿಸಿ ಮುಷ್ಕರ ಹಿಂಪಡೆಯುವಂತೆ ಮಾಡುವಲ್ಲಿ ಸರ್ಕಾರ ವಿಫಲವಾದಲ್ಲಿ ನಂದಿನಿ ಹಾಲು ಪೂರೈಕೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.














