ಮನೆ ರಾಜಕೀಯ ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ಇಡ್ಲಿ–ದೋಸೆ ಸಿದ್ಧ ಹಿಟ್ಟು ಮಾರಾಟಕ್ಕೆ ಕೆಎಂಎಫ್‌ ಸಜ್ಜು

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ಇಡ್ಲಿ–ದೋಸೆ ಸಿದ್ಧ ಹಿಟ್ಟು ಮಾರಾಟಕ್ಕೆ ಕೆಎಂಎಫ್‌ ಸಜ್ಜು

0

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿಯೇ ಇಡ್ಲಿ, ದೋಸೆಯ ಸಿದ್ಧ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಉತ್ಪನ್ನ 10 ದಿನಗಳೊಳಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ.

Join Our Whatsapp Group

ಮೊದಲ ಹಂತದಲ್ಲಿ ಪ್ರತಿದಿನ 10 ಸಾವಿರದಿಂದ 20 ಸಾವಿರ ಕೆ.ಜಿ ಹಿಟ್ಟನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲಾಗುವುದು. ಇದಕ್ಕಾಗಿಯೇ ಜಯನಗರದಲ್ಲಿ ಪ್ಯಾಕಿಂಗ್‌ ಘಟಕ ಒಂದನ್ನು ತೆರೆಯಲಾಗಿದೆ. ಸಿದ್ಧ ಹಿಟ್ಟು ಮಾರಾಟಕ್ಕೆ ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ತಿಳಿಸಿದರು.

ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಇಡ್ಲಿ ಮತ್ತು ದೋಸೆಯ ಸಿದ್ಧ ಹಿಟ್ಟಿನ ದರಕ್ಕಿಂತ ಕಡಿಮೆ ಬೆಲೆಗೆ ನಂದಿನಿ ಬ್ರ್ಯಾಂಡ್‌ನ ಇಡ್ಲಿ ಮತ್ತು ದೋಸೆಯ ಹಿಟ್ಟು ಗ್ರಾಹಕರಿಗೆ ಸಿಗಲಿದೆ. ಎರಡನೇ ಹಂತದಲ್ಲಿ ರಾಜ್ಯದಾದ್ಯಂತ ಮಾರಾಟ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.

ದೋಸೆ–ಇಡ್ಲಿ ಹಿಟ್ಟು 450 ಗ್ರಾಂ ಹಾಗೂ 900 ಗ್ರಾಂ ಪ್ಯಾಕೆಟ್‌ ಗಳಲ್ಲಿ ಮಾರುಕಟ್ಟೆಗೆ ಬರಲಿದೆ. ದೋಸೆ, ಇಡ್ಲಿ ಹಿಟ್ಟು ದರ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ ಎಂದು ತಿಳಿಸಿದರು.

ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಮಾರಂಭ ಆಯೋಜಿಸಲು ಮುಖ್ಯಮಂತ್ರಿಯವರ ಸಮಯ ಕೋರಲಾಗಿದೆ. ಮುಖ್ಯಮಂತ್ರಿಯವರು ಸಮಯಾವಕಾಶ ನೀಡಿದ ಬಳಿಕ ಉತ್ಪನ್ನಗಳ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದರು.