ಮನೆ ಆರೋಗ್ಯ ಪ್ರತಿದಿನ ಓಟ್ಸ್​ ಸೇವಿಸುವ ಮುನ್ನ ಈ ವಿಷಯವೂ ತಿಳಿದಿರಲಿ

ಪ್ರತಿದಿನ ಓಟ್ಸ್​ ಸೇವಿಸುವ ಮುನ್ನ ಈ ವಿಷಯವೂ ತಿಳಿದಿರಲಿ

0

ಓಟ್ಸ್ ಅನ್ನು ಆರೋಗ್ಯಕರ ಆಹಾರ ಎಂದು ಹೇಳಲಾಗುತ್ತದೆ. ಫೈಬರ್ ಅಂಶ ಹೆಚ್ಚಾಗಿರುವ ಓಟ್ಸ್​ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಆದರೆ, ಬೇರೆ ಇತರ ಆಹಾರದಂತೆ, ಓಟ್ಸ್ ಎಲ್ಲರ ಆರೋಗ್ಯಕ್ಕೂ ಸೂಕ್ತವಲ್ಲ. ತೂಕ ಇಳಿಸಲೆಂದು ಕೆಲವರು ದಿನವೂ ಓಟ್ಸ್​ ತಿನ್ನುತ್ತಾರೆ. ಇದರಿಂದ ಅನೇಕ ಅಡ್ಡಪರಿಣಾಮಗಳು ಕೂಡ ಆಗಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.

Join Our Whatsapp Group

ಓಟ್ಸ್ ಸ್ವಾಭಾವಿಕವಾಗಿ ಗ್ಲುಟನ್-ಮುಕ್ತವಾಗಿದ್ದರೂ ಕೆಲವು ಜೀರ್ಣಕಾರಿ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಇದರಿಂದ ಸಮಸ್ಯೆ ಉಂಟಾಗಬಹುದು. ಜೀರ್ಣಕ್ರಿಯೆಯ ಸಮಸ್ಯೆ ಇರುವವರಿಗೆ ಓಟ್ಸ್ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುವುದು ಮತ್ತು ಗ್ಯಾಸ್ ಮುಂತಾದ ತೊಂದರೆ ಉಂಟಾಗಬಹುದು. ಓಟ್ಸ್ ಸಂಕೀರ್ಣ ಕಾರ್ಬೋಹೈಡ್ರೇಟ್ ಆಗಿದ್ದರೂ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ. ಇದು ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರಿಗೆ ತೊಂದರೆ ಉಂಟುಮಾಡಬಹುದು. ಸಮತೋಲಿತ ಆಹಾರಕ್ಕಾಗಿ ಕಾರ್ಬೋಹೈಡ್ರೇಟ್‌ಗಳು ಮುಖ್ಯವಾಗಿದ್ದರೂ ಹೆಚ್ಚು ಓಟ್ಸ್ ತಿನ್ನುವುದು ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸೇವಿಸುವುದಕ್ಕೆ ಕಾರಣವಾಗಬಹುದು.

ಫಿಸಿಕೊ ಡಯಟ್ ಮತ್ತು ಸೌಂದರ್ಯದ ಚಿಕಿತ್ಸಾಲಯದ ಸಂಸ್ಥಾಪಕಿ, ಆಹಾರ ತಜ್ಞರಾದ ವಿಧಿ ಚಾವ್ಲಾ ಓಟ್ಸ್​ ಬಗ್ಗೆ ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ. ಓಟ್ಸ್​ನಲ್ಲಿ ರಂಜಕದ ಪ್ರಮಾಣ ಹೆಚ್ಚಾಗಿರುತ್ತದೆ. ಇದು ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಸಮಸ್ಯೆಯಾಗಬಹುದು. ದುರ್ಬಲಗೊಂಡ ಮೂತ್ರಪಿಂಡದ ಕ್ರಿಯೆಯ ಸಂದರ್ಭಗಳಲ್ಲಿ ಹೆಚ್ಚುವರಿ ರಂಜಕದ ಸೇವನೆಯು ಮಿನರಲ್ಸ್​ ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಮೂತ್ರಪಿಂಡದ ಆರೋಗ್ಯ ಹದಗೆಡುತ್ತದೆ. ಹೀಗಾಗಿ, ಮೂತ್ರಪಿಂಡದ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಓಟ್ಸ್​ ಸೇವಿಸುವುದು ಉತ್ತಮ ಎಂದಿದ್ದಾರೆ.

ಗೋಧಿಯಂತಹ ಇತರ ಧಾನ್ಯಗಳಿಗೆ ಅಲರ್ಜಿಗಳಿಗೆ ಹೋಲಿಸಿದರೆ ಓಟ್ಸ್​ನಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಕಡಿಮೆ. ಆದರೂ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಕೆಲವೊಮ್ಮೆ ಚರ್ಮದ ಕಿರಿಕಿರಿ ಉಂಟಾಗಬಹುದು.

ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಓಟ್-ಆಧಾರಿತ ಉತ್ಪನ್ನಗಳಾದ ಇನ್ ​ಸ್ಟಂಟ್​ ಓಟ್ಸ್ ಮತ್ತು ಫ್ಲೇವರ್ ಇರುವ ಓಟ್ ಮೀಲ್ ಅನ್ನು ಹೆಚ್ಚು ಸಂಸ್ಕರಿಸಿರಬಹುದು. ಅದಕ್ಕೆ ಸಕ್ಕರೆ, ಕೃತಕ ವಾಸನೆ, ಪ್ರಿಸರ್ವೇಟಿವ್ ಹಾಕಿರುತ್ತಾರೆ. ಹೀಗಾಗಿ, ಇವುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು. ಕಡಿಮೆ ಸಂಸ್ಕರಿಸಿದ, ಸರಳವಾದ ಓಟ್ಸ್ ಅನ್ನು ಆರಿಸಿಕೊಳ್ಳುವುದು ಉತ್ತಮ.