ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿನ ಕಾಲೇಜು ಹಾಸ್ಟೆಲ್ನಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಯಚೂರು ಮೂಲದ ತೇಜಸ್ವಿನಿ ಎಂಬ ವಿದ್ಯಾರ್ಥಿನಿ ತಾನು 6 ವಿಷಯಗಳಲ್ಲಿ ಬ್ಯಾಕ್ಲಾಗ್ಗಳು ಇದ್ದ ಕಾರಣವಾಗಿ ವಿದ್ಯಾಭ್ಯಾಸ ಮುಂದುವರಿಸಲು ಮನಸ್ಸಾಗಿಲ್ಲವೆಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತೇಜಸ್ವಿನಿ, ರಾಯಚೂರಿನ ಮಹಾಂತಪ್ಪ ಎಂಬವರ ಏಕೈಕ ಪುತ್ರಿ ಆಗಿದ್ದಾಳೆ. ಕೋಡಗು ಜಿಲ್ಲೆಯ ಹಳ್ಳಿಗಟ್ಟಿನಲ್ಲಿ ಇರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಐಎಂಎಲ್ ಕೋರ್ಸ್ ಅನ್ನು ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗಷ್ಟೆ ತಾನು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಗೆಳೆಯರು, ಸಹಪಾಠಿಗಳಿಗೆ ಸಿಹಿ ಹಂಚಿದ್ದಳು. ಆತ್ಮಹತ್ಯೆಗೆ ದಿನವೂ ಸಹ ಆಕೆಯ ಚಲನವಲನಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಮೇ 28ರಂದು ಸಂಜೆ 4 ಗಂಟೆ ಸುಮಾರಿಗೆ ತೇಜಸ್ವಿನಿ ತರಗತಿಗಳು ಮುಗಿಸಿ ಹಾಸ್ಟೆಲ್ಗೆ ಬಂದಿದ್ದಳು. ಸುಮಾರು 4:30ರ ವೇಳೆಗೆ ಆಕೆಯ ಸಹಪಾಠಿಯೊಬ್ಬಳು ಆಕೆಯ ಕೊಠಡಿಗೆ ಬಂದು ಬಾಗಿಲು ತಟ್ಟಿದಾಗ, ಒಳಗಿನಿಂದ ಬಾಗಿಲು ಲಾಕ್ ಮಾಡಲಾಗಿತ್ತು. ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಕಾರಣ ಆಕೆ ಕೂಡಲೇ ಹಾಸ್ಟೆಲ್ ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದಾರೆ. ಮೇಲ್ವಿಚಾರಕರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೇಜಸ್ವಿನಿ ಬರೆದಿಟ್ಟಿರುವ ಡೆತ್ ನೋಟ್ನಲ್ಲಿ, “ಆರು ವಿಷಯಗಳಲ್ಲಿ ಬ್ಯಾಕ್ಲಾಗ್ ಇದ್ದ ಕಾರಣ ನನ್ನ ಮುಂದೆ ವಿದ್ಯಾಭ್ಯಾಸ ಮುಂದುವರಿಸಲು ಇಚ್ಛೆಯಾಗುತ್ತಿಲ್ಲ. ಎಲ್ಲರಿಗೂ ಕ್ಷಮೆ ಕೋರುತ್ತೇನೆ” ಎಂದು ತಿಳಿಸಿದ್ದಾರೆ.
ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯದ ತನಿಖೆ ನಡೆಯುತ್ತಿದೆ. ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ ಮತ್ತು ಹಾಸ್ಟೆಲ್ ಸಿಬ್ಬಂದಿಯಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ.














