ಮೈಸೂರು(Mysuru): ಕೊಡಗು ಜನರಿಗೆ ಕಾಂಗ್ರೆಸ್- ಬಿಜೆಪಿ ಎರಡೂ ಪಕ್ಷಗಳ ಮೇಲೆ ಆಕ್ರೋಶ ಇದೆ. ಎರಡೂ ಪಕ್ಷಗಳು ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಕೊಡಗು ಜಿಲ್ಲೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಬೇಕು. ಇದು ಕೊಡವರ ಬಹುದಿನಗಳ ಬೇಡಿಕೆ ಇದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಎಂದರು.
ಕೊಡಗು ಹಿಂದೆ ಮಂಗಳೂರು ಕ್ಷೇತ್ರದೊಂದಿಗೆ ಸೇರಿತ್ತು. ಈಗ ಮೈಸೂರು ಕ್ಷೇತ್ರದೊಂದಿಗೆ ಇದೆ. ಈಶಾನ್ಯ ರಾಜ್ಯಗಳಲ್ಲಿ 3-4 ಲಕ್ಷ ಜನಸಂಖ್ಯೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳು ಇವೆ. ಹೀಗಿರುವಾಗ ಕೊಡಗು ಪ್ರತ್ಯೇಕ ಲೋಕಸಭಾ ಕ್ಷೇತ್ರ ಯಾಕಾಗಬಾರದು ? ಕೊಡಗು ಅತ್ಯುತ್ತಮ ಪ್ರವಾಸಿ ತಾಣ. ಮಳೆಯಿಂದ ಇತ್ತೀಚೆಗೆ ಅಪಾರ ಹಾನಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಜನ ರಾಜಕೀಯ ನಾಯಕರ ಮೇಲೆ ಮೊಟ್ಟೆ, ಕಲ್ಲು, ಟೊಮ್ಯಾಟೋ, ಸಗಣಿ ಹೊಡೀತಾರೆ, ಇದು ಸಹಜ. ಒಳ್ಳೆಯವರು ಇರುವ ರೀತಿಯಲ್ಲಿ ಪುಂಡ ಪೋಕರಿಗಳು ಇರುತ್ತಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಕೊಡಗು ಯಾತ್ರೆ ಬಗ್ಗೆ ಪುನರ್ ಅವಲೋಕನ ಮಾಡಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ಪಾದಯಾತ್ರೆ ಹಿಂಪಡೆಯಬೇಕು. ಚುನಾವಣೆ ಬರುತ್ತಿದೆ. ಏನೇನೋ ಆಗಬಹುದು. ಅದಕ್ಕೆ ನೀವು ಹೊಣೆ ಆಗಬೇಡಿ. ಬೇಕಿದ್ದರೆ ವಿಧಾನಸಭೆಯಲ್ಲಿ ಅವಿಶ್ವಾಸ ಮಂಡಿಸಿ. ಮೊಟ್ಟೆ ವಿಚಾರ ರಾಷ್ಟ್ರೀಯ ಸುದ್ದಿ ಆಗಿದೆ. ಮಳೆಯಿಂದ ಮಕ್ಕಳು ತೇಲಿ ಹೋಗಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಮುತ್ತಿಗೆ ಹಾಕುವುದು ನಿಮ್ಮಂಥ ನಾಯಕರಿಗೆ ಶೋಭಾಯಮಾನ ಅಲ್ಲ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಂತಹ ಮುತ್ಸದ್ಧಿ ರಾಜಕಾರಣಿ ಮೇಲೆ ಮೊಟ್ಟೆ ಎಸೆದಿದ್ದು ಸರಿಯಲ್ಲ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಯಡಿಯೂರಪ್ಪ ಅವರು ಮಧ್ಯಸ್ಥಿಕೆ ವಹಿಸಬೇಕು. ಎರಡೂ ಕಡೆಯವರನ್ನು ಮನವೊಲಿಸಬೇಕು. ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ನೀವು ಹೋರಾಟ ಮಾಡಿ ಎಂದು ಹೇಳಿದರು.