ಮನೆ ರಾಜ್ಯ ಕೋಗಿಲು ಲೇಔಟ್‌ ಜಟಾಪಟಿ – ಕೇರಳ & ಕರ್ನಾಟಕ ಸಿಎಂ ಹ್ಯಾಂಡ್‌ಶೇಕ್‌

ಕೋಗಿಲು ಲೇಔಟ್‌ ಜಟಾಪಟಿ – ಕೇರಳ & ಕರ್ನಾಟಕ ಸಿಎಂ ಹ್ಯಾಂಡ್‌ಶೇಕ್‌

0

ತಿರುವನಂತಪುರಂ : ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಗಳ ತೆರವು ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ಜಟಾಪಟಿ ನಡೆದಿದೆ. ಇದರ ಮಧ್ಯೆ, ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಸಿಎಂ ಹಾಗೂ ಕೇರಳ ಸಿಎಂ ಇಬ್ಬರೂ ವೇದಿಕೆ ಹಂಚಿಕೊಂಡಿದ್ದು, ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ವರ್ಕಲಾದ ಶಿವಗಿರಿ ಮಠದಲ್ಲಿ ಬುಧವಾರ ನಡೆದ 93ನೇ ಶಿವಗಿರಿ ತೀರ್ಥಯಾತ್ರೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕರ್ನಾಟಕ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಪ್ರತಿ ವರ್ಷ ಡಿಸೆಂಬರ್ 30 ರಿಂದ ಜನವರಿ 1 ರವರೆಗೆ ಮೂರು ದಿನಗಳ ಕಾಲ ತಿರುವನಂತಪುರದ ಶಿವಗಿರಿಯಲ್ಲಿ ಶಿವಗಿರಿ ತೀರ್ಥಯಾತ್ರೆ ನಡೆಯುತ್ತದೆ.‌

ಕೋಗಿಲು ಅಕ್ರಮ ಒತ್ತುವರಿ ಧ್ವಂಸ ಪ್ರಕರಣದ ರಾಜಕೀಯ ಘರ್ಷಣೆಯ ನಂತರ, ಸಿದ್ದರಾಮಯ್ಯ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಂದೇ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರ ಭಾಷಣಕ್ಕೂ ಮೊದಲೇ ವಿಜಯನ್ ಕಾರ್ಯಕ್ರಮದಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ. ಆದರೆ, ಹೊರಡುವ ಮೊದಲು ಕೇರಳ ಸಿಎಂ, ಸಿದ್ದರಾಮಯ್ಯ ಅವರ ಬಳಿಗೆ ಹೋಗಿ ಆತ್ಮೀಯವಾಗಿ ಮಾತನಾಡಿದರು. ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ತಾವು ಹೊರಡಬೇಕಾದ ತುರ್ತು ಪರಿಸ್ಥಿತಿಯನ್ನು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿ ಹೊರಟರೆಂದು ತಿಳಿದುಬಂದಿದೆ.

ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಗಳ ತೆರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಖಂಡಿಸಿದ್ದರು. ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಮಾತಿಗೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಅತಿಕ್ರಮಣ ತೆರವು ಕಾರ್ಯಾಚರಣೆಯ ಬಗ್ಗೆ ಸತ್ಯಗಳನ್ನು ತಿಳಿಯದೆ ವಿಜಯನ್ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಚುನಾವಣಾ ವೇಳೆ ರಾಜಕೀಯ ಗಿಮಿಕ್‌ಗೆ ಇಂತಹ ಹೇಳಿಕೆ ಕೊಡಬಾರದು ಅಂತ ಕೇರಳ ಸಿಎಂಗೆ ಡಿ.ಕೆ.ಶಿವಕುಮಾರ್‌ ಟಾಂಗ್‌ ಕೊಟ್ಟಿದ್ದರು.